Saturday 2 March 2013

ಅಪ್ಪ....

                                                           


                                                               ಇಪ್ಪತ್ತು  ವರ್ಷಗಳ ಹಿಂದಿನ ಮಾತು ..... ತೊದಲು ಮಾತನ್ನು ಕಲಿತಿದ್ದೆನಂತೆ.... "ಆsss ಯಿ..  ", "ಅಪ್ಪಾsss.." , "ಅಕ್ಕಾ ", "ಅಣ್ಣಾ "........ "ಅಬ್ಬೆ"(ಅಜ್ಜಿ).... ಎಂದೆಲ್ಲ ಹೇಳಿಕೊಂಡು ಎಲ್ಲರ ಮುದ್ದಿನ ಮಗುವಾಗಿದ್ದೆನಂತೆ ... ಅಬ್ಬೆಗೆ ನಾನು ಅಂದರೆ ಪ್ರಾಣವಾಗಿತ್ತಂತೆ.  ದಿನವಿಡೀ ನನ್ನ ಆರೈಕೆಯಲ್ಲೇ ಕಾಲ ಕಳೆಯುತ್ತಿದ್ದ  ಹಣ್ಣೆಲೆ  ಆಗಿದ್ದಳಂತೆ. ಮೈತುಂಬಿಕೊಂಡಿದ್ದ  ಮಗುವನ್ನು ಎತ್ತಿಕೊಳ್ಳಲು  ಆಳುಕಾಳುಗಳು, ಪಕ್ಕದ ಮನೆಯವರು ಕಾಯುತ್ತಿದ್ದರಂತೆ.  ಕೆಟ್ಟಕಣ್ಣು  ಬೀಳುತ್ತದೆ ನನ್ನ ಮೊಮ್ಮಗಳಿಗೆ ಎಂದು ಸೆರಗಿನಲ್ಲಿ ಮುಚ್ಚಿಟ್ಟುಕೊಂಡು  ಓಡಾಡುತ್ತಿದ್ದಳಂತೆ.


                                                                ಪಾಪ ದಮ್ಮುರೋಗ  ಅಬ್ಬೆಯನ್ನು ಆವರಿಸಿತ೦ತೆ . ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಬ್ಬೆ ಕೊನೆಗಾಲವನ್ನು ಆಸ್ಪತ್ರೆಯಲ್ಲೇ ಕಳೆಯಬೇಕಾಯಿತಂತೆ... ಮನೆಗೆ ವಾಪಸ್  ಬರಲು ಹವಣಿಸುತ್ತಿದ್ದ ಜೀವಕ್ಕೆ ಮಗನಾದ "ದತ್ತಾತ್ರೇಯ " ಸಾಂತ್ವನ ಹೇಳುತ್ತಿದ್ದನಂತೆ. ಪಾಪ ಆ ಜೀವ ಮನೆಗೆ ಬರದೇ  ಮಕ್ಕಳು ಮೊಮ್ಮಕ್ಕಳನ್ನು ನೆನೆಸಿಕೊಂಡು  ಆಸ್ಪತ್ರೆಯಲ್ಲೇ ಕೊನೆಯುಸಿರೆಳೆಯಿತಂತೆ...

                                                                 ಅಂತ್ಯಕ್ರಿಯೆ ಮುಗಿಸಿದ ಮಕ್ಕಳು ಕಾಲಕ್ರಮೇಣ ದುಃಖವನ್ನು ಮರೆತರು. ಎಲ್ಲರು ಅವರವರ ಬದುಕಿನಲ್ಲಿ ತೊಡಗಿದರು. ಎರಡು ವರ್ಷದ ಮಗುವಾಗಿದ್ದ ನನಗೆ  "ಆಸ್ತಮಾ" ಶುರುವಾಯಿತಂತೆ. ತಾಯಿಯನ್ನು ಬಲಿ ತೆಗೆದುಕೊಂಡ ರೋಗ ಮಗಳನ್ನು ಬಿಡುತ್ತಿಲ್ಲವಲ್ಲ ಎಂದು  ನರಳಾಡಿತು  ದತ್ತತ್ರಯನ ಮನಸ್ಸು.
ತಾಯಿಯನ್ನು ಕಳೆದುಕೊಂಡಾಗಿದೆ, ಚಿಗುರುತ್ತಿವ ಮೊಳಕೆಯನ್ನು ಚಿವುಟಲು ಬಿಡುವುದಿಲ್ಲ ಎಂದು ನಿರ್ಧರಿಸಿದ...


                                                                ಹಗಲು  ರಾತ್ರಿಯೆನ್ನದೆ  ಮಗಳನ್ನು ಆರೈಕೆ ಮಾಡಲು ತೊಡಗಿದ . ಹಳ್ಳಿಯ ಆಯುರ್ವೇದ  ಕಶಾಯಗಳನ್ನೆಲ್ಲ  ತಂದು ಕುಡಿಸಿ ಮಗಳ ಕಾಯಿಲೆಯನ್ನು ಸ್ವಲ್ಪ ಮಟ್ಟಿಗೆ ಗುಣಮುಖವಾಗುವಂತೆ ಮಾಡಿದ.
ರಾತ್ರಿಯೆಲ್ಲಾ ಮಡಿಲಲ್ಲಿ ಮಲಗಿಸಿಕೊಂಡು ಬಿಸಿನೀರ ಶಾಕ ಕೊಟ್ಟು ಉಸಿರಾಟ ಸಲೀಸಾಗುವಂತೆ ಮಾಡುತ್ತಿದ್ದ.
ಅಂತು ಇಂತೂ  ನನಗೆ ಐದು ವರ್ಷ ಆಯಿತು .. ಶಾಲೆಗೆ  ಹೆಸರು ಹಚ್ಚಿಸಿದ.  ಆದರೆ ನಮ್ಮೂರಿನಲ್ಲಿ ಶಾಲೆ ಇಲ್ಲ...  ನಾಲ್ಕು ಕಿಲೋಮೀಟರ್ ನಡೆದು ಹೋಗಬೇಕಿತ್ತು ... ನನ್ನ ಅನಾರೋಗ್ಯದ ಕಾರಣ ನನಗೆ ನಡೆಯಲು ಆಗುತ್ತಿರಲಿಲ್ಲ.. ಅದಕ್ಕಾಗಿ  ಅಜ್ಜನ ಮನೆಯಲ್ಲಿ ನನ್ನನ್ನು ಬಿಟ್ಟು ಅಲ್ಲಿ ಹತ್ತಿರವಿದ್ದ ಶಾಲೆಗೇ ಸೇರಿಸಿದ.


                                                                    ಆಗ ನನಗೆ  ಅಸ್ತಮಾ  ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿತ್ತು .  ಹದಿನೈದು ದಿನಕ್ಕೆ ಒಮ್ಮೆ  ಕಾಣಿಸಿಕೊಳ್ಳುತ್ತಿತ್ತು. ನನಗೆ ಇನ್ನು ನೆನಪಿದೆ  ಅವತ್ತಿನ ದಿನ ರಾತ್ರಿ ..  ಸುಮಾರು  ಹನ್ನೆರಡು ಗಂಟೆ ದಾಟಿರಬಹುದು ....  ನನಗೆ ಉಸಿರಾಟ ಕಷ್ಟವಾಗಿತ್ತು...  ಆಗ ಹಳ್ಳಿಗಳಲ್ಲಿ ಇನ್ನೂ  ಫೋನಿನ  ವ್ಯವಸ್ತೆ  ಇರಲಿಲ್ಲ ... ಅಪ್ಪನಿಗೆ ಸುದ್ದಿ ಮುಟ್ಟಿಸುವುದು  ಕಷ್ಟವಾಗಿತ್ತು ..ನನ್ನ ಮಾವ (ಅಮ್ಮನ ಅಣ್ಣ ) ಹತ್ತಿರದ "ನೆಲೆಮಾವಿಗೆ "(ಊರಿನ ಹೆಸರು ) ಹೋಗಿ ಅಲ್ಲಿ ಚಂದ್ರಶೇಕರ ಭಟ್ಟ ಎಂಬ ವೈದ್ಯರಿದ್ದರು ... ಅವರ ಬಳಿ  ಕರೆದುಕೊಂಡು ಹೋಗಿ ತಾತ್ಕಾಲಿಕ ಚಿಕಿತ್ಸೆ ನೀಡಿಸಿದರು. ನಂತರ ಪರಿಸ್ತಿತಿ ಕೈ ಮೀರುವುದರೊಳಗೆ ವಾಹನದ ವ್ಯವಸ್ತೆ ಮಾಡಿ ಸಿರಸಿಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರು.

                                                                     ಮರುದಿನ  ಅಪ್ಪ ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋದ... ಆಗ  ಎಲ್ಲಾ  ಕಡೆ ವಿಚಾರಿಸಲು ತೊಡಗಿದ  ಅಸ್ಥಮ ಕ್ಕೆ  ಯಾವ ಯಾವ ಹಳ್ಳಿಗಳಲ್ಲಿ  ಔಷಧ  ಕೊಡುತ್ತಾರೆ ಎಂದು.  ನಂತರ ನನ್ನನ್ನು ಅಜ್ಜನ ಮನೆಗೆ ಕಳಿಸಲಿಲ್ಲ.  ಹಿತ್ಲಕೈ  ಶಾಲೆಗೇ ಶಿಕ್ಷಕರನ್ನು ಕರೆತರಲು "BEO" ಕಚೇರಿಗೆ ಅಲೆದಾಟ ಆರಂಬಿಸಿದ..  ಅಂತು ಇಂತೂ ಅಪ್ಪನ  ಪರಿಶ್ರಮಕ್ಕೆ ಬೆಲೆ ಸಿಕ್ಕಿತು... ಹಿತ್ಲಕೈ  ಸರಕಾರಿ  ಪ್ರಾಥಮಿಕ  ಶಾಲೆ  ಪ್ರಾರಂಭವಾಯಿತು. ಶಾಲೆಯ ಕತೆಯನ್ನು  " ಶಾಲೆ ಮಾಸ್ತರು " ಶೆರ್ಷಿಕೆಯಡಿಯಲ್ಲಿ  ಆಗಲೇ ಬರೆದಿದ್ದೇನೆ ...

                                                                     ನಂತರ ಅಪ್ಪ ನನಗೆ  ಎಲ್ಲ ಹಳ್ಳಿಗಳಲ್ಲಿ ಔಷದ ಗಳನ್ನೂ  ಕೊಡಿಸಿದರು... ಒಂದೊಂದು ಔಷದಿಯು  ಒಂದೊಂದು ರುಚಿ .... ಕೆಲವೊಂದು ಕಹಿ ... ಕೆಲವೊಂದು ಕೋಳಿಮೊಟ್ಟೆಯ ವಾಸನೆ ... ಕೆಲವೊಂದು ಖಾರ ... ಬೇಡ ಎಂದರು ಕೇಳದೆ ಬಾಯಿಗೆ "ಗೊಟ್ಟ " ಇಟ್ಟು  ಕುಡಿಸುವ ನಾಟಿ ವೈದ್ಯರು ...  ಅದರ ಮೇಲಿನಿಂದ
"ಪಥ್ಯ"....  ಮೊಸರು ತಿನ್ನಬಾರದು, ಕರಿದ ಪದಾರ್ಥ ತಿನ್ನಬಾರದು, ಕೊನೆಗೆ ಬಾಳೆಹಣ್ಣು ತಿನ್ನಬಾರದು ....

                                                                      ಮನೆಯಲ್ಲಿ ಹಬ್ಬಗಳಾದಾಗ  ಅಳುವೇ ಬರುತ್ತಿತ್ತು .... ಎಲ್ಲರು  ತಿನ್ನುತ್ತಾರೆ ನಾನು ಮಾತ್ರ "ಪಥ್ಯ "...... "ಗಣೇಶ ಹಬ್ಬ "ವಾಗಿತ್ತು ....  ಆಯಿ ಚಕ್ಕುಲಿ ಮಾಡುತ್ತಿದ್ದಳು ... ತುಂಬಾ ಆಸೆಯಾಗಿ  ಯಾರೂ ಇಲ್ಲದ ಹೊತ್ತಿನಲ್ಲಿ ಎರಡು ಚಕ್ಕುಲಿ ತೆಗೆದು ತಿಂದುಬಿಟ್ಟೆ... ಅಪ್ಪ ತೋಟಕ್ಕೆ ಹೋಗಿದ್ದರು .... ನನಗೆ ಉಸಿರಾಟದ ತೊಂದರೆ ಶುರು ...... ಎಷ್ಟು ತೀವ್ರವಾಗಿತ್ತೆಂದರೆ  ಉಸಿರಾಟ ನಿಂತು ನಿಂತು ಆಗುತ್ತಿತ್ತು ... ಏನೇ ಮಾಡಿದರು ನಿಯಂತ್ರಣಕ್ಕೆ ಬರಲಿಲ್ಲ.. ..  ಆಗ ನಮ್ಮೂರಿಗೆ ಬಸ್ಸಿನ ವ್ಯವಸ್ತೆ ಇರಲಿಲ್ಲ ... ಅಘನಾಶಿನಿ  ನದೀ ದಾಟಿ  ಐದು ಕಿಲೋಮೀಟರ್ ನಡೆದರೆ ಅಲ್ಲಿಂದ ಸಿರ್ಸಿ ಗೆ ಹೋಗಲು ಬಸ್ ಸಿಗುತ್ತಿತ್ತು ...

                                                             ಅಪ್ಪ  ತೋಟದಿಂದ ಬಂದವರೇ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ನದಿ ದಾಟಿ ನಡೆದು ಕೊಂಡೆ ಹೋಗಿ ಆಸ್ಪತ್ರೆಗೆ ಸೇರಿಸಿದರು ... ಒಂದು ವಾರದ  ನಂತರ ನನ್ನ  ಅರೋಗ್ಯ ಸುಧಾರಿಸಿತು ... ನಂತರ  " ನೆರ್ಲಮನೆ " ಯಲ್ಲಿ ಒಬ್ಬರು ಡಾಕ್ಟರ್  ಇದ್ದರು .. ಅವರು ಇಂಗ್ಲೆಂಡಿನಲ್ಲಿ ಡಾಕ್ಟರ ಆಗಿ ಕೆಲಸ ಮಾಡುತ್ತಿದ್ದರು ... ಅವರ ಬಳಿ  ಚಿಕಿತ್ಸೆ ನೀಡಿಸಿದರು ...  ನಂತರ ಒಂದು ಔಷದದ ಶೀಶೆ ನನ್ನ ಬಳಿ ಯಾವಾಗಲು ಇಟ್ಟುಕೊಂಡಿರಲು ಹೇಳಿದರು ...  ಉಸಿರಾಟಕ್ಕೆ ತೊಂದರೆ ಆದ ತಕ್ಷಣ ಅದನ್ನು ಬಾಯಿಗೆ ಸ್ಪ್ರೇ ಮಾಡಿಕೊಳ್ಳಲು ಹೇಳಿದರು .... ಇದರಿಂದ ನನ್ನ ಉಸಿರಾಟದ ತೊಂದರೆಗೆ ಪರಿಹಾರ  ಸಿಕ್ಕಿತು , ಆದರೆ ಔಷದ  ಹೃದಯಕ್ಕೆ ಹಾನಿ ಮಾಡಲು ಪ್ರಾರಂಭಿಸಿತ್ತು ... !!!!

                                                            ಮತ್ತೆ ಅಪ್ಪನಿಗೆ ಚಿಂತೆ ಶುರು .... ಮಗಳನ್ನು ಕಾಪಾಡಬೇಕು...  ಎಲ್ಲ ದೇವರಿಗೂ ಹರಕೆ ಹೊತ್ತರು ...  ಯಾವಾಗಲು ಅಪ್ಪನ ಮಡಿಲಲ್ಲೇ ಮಲಗುತ್ತಿದ್ದೆ ... ಆಯಿ ತುಂಬಾ ಭಾವುಕಳು ... ಅವಳಿಗೆ ನನ್ನ ಪರಿಸ್ತಿತಿ ಅಳುವನ್ನೇ ತರುತ್ತಿತ್ತು ... ಆಯಿಗೆ ಸಮಾಧಾನ ಹೇಳುತ್ತಿದ್ದೆ "ನನಗೆ ಎಂತೂ ಆಗ್ತಿಲ್ಲೆ ಆಯಿ ... ಅಪ್ಪ ನಂಗೆ ಎಂತ ಆಗಲು ಬಿಡ್ತ್ನಿಲ್ಲೇ .." ನನ್ನ ಅಪ್ಪನ ಮೇಲೆ ಅಷ್ಟು ನಂಬಿಕೆ ...  ಮತ್ತೆ ಹಳ್ಳಿ ಔಷದಿಯ ಮೊರೆ ಹೋಗಿದ್ದೆವು .... ಆಗ ನಾನು 9 ನೇ  ತರಗತಿ ಓದುತ್ತಿದ್ದೆ ..." ಹಲಸಿನ ಹಳ್ಳಿ " ಎಂಬಲ್ಲಿ ಗೆ  ಕರೆದು ಕೊಂಡು  ಹೋಗಿ ಸೊಪ್ಪಿನ ಔಷದಿ ಕುಡಿಸಿದರು ... ನನ್ನ ಅಪ್ಪನ ಪರಿಶ್ರಮಕ್ಕೆ ಅಲ್ಲಿ ಬೆಲೆ ಸಿಕ್ಕಿತು .... ನನ್ನ ಅಸ್ಥಮ ಒಂದು ವಾರಕ್ಕೆ ಸಂಪೂರ್ಣವಾಗಿ ಮಾಯಾ ... ನಾನು ಮೊಸರು ತಿನ್ನುತ್ತಿದ್ದೆ , ಕರಿದದ್ದು ತಿಂದೆ ಏನು ಆಗಲೇ ಇಲ್ಲ ........


                                                                 ಅಪ್ಪ ಎಲ್ಲ ಜನ್ಮದಲ್ಲೂ  ನೀನೆ ನನ್ನ ಅಪ್ಪ ಆಗಿರು ಎಂದು  ಬಯಸುತ್ತೇನೆ ...ನಾನು ಇವತ್ತು ಖುಷಿಯಿಂದ ಜೀವನ ನಡೆಸುತ್ತ ಇದ್ದೀನಿ ಅಂದ್ರೆ ಅದಕ್ಕೆ ನೀನೆ ಕಾರಣ ... ಪ್ರತ್ಯಕ್ಷ ದೇವರು .... ನಾನು ದೇವರನ್ನು ನಂಬುವುದಕ್ಕಿಂತ  ಜಾಸ್ತಿ  ಅಪ್ಪನನ್ನು  ನಂಬುತ್ತೇನೆ ... ಇಷ್ಟು ಒಳ್ಳೆ ಅಪ್ಪನನನ್ನು ನನಗೆ ಕೊಟ್ಟಿದ್ದಕ್ಕೆ ದೇವರಿಗೂ ಒಂದು ಥ್ಯಾಂಕ್ಸ್ ...................


                                              

                                                                 


15 comments:

  1. Niceone..... AGHANASHINI means PAPANASHINI.....

    ReplyDelete
  2. ಸಮನ್ವಯಾ..ಬಹಳ ಸುಂದರವಾಗಿದೆ ಅಪ್ಪನ ಮೇಲಿನ ನಿಮ್ಮ ಆಪ್ಯಾಯತೆ ಪ್ರೀತಿ..ನಿಜಕ್ಕೂ ಅಪ್ಪ ಏನೂ ಹೇಳದೇ ಎಲ್ಲಾ ಮಾಡುತ್ತಾರೆ, ಮಕ್ಕಳ ಆರೋಗ್ಯ ಕೆಟ್ಟಾಗ ಚಡಪಡಿಕೆ ತಾಯಿಯ ಕಾಣುವ ಕಣ್ಣೀರಷ್ಟೇ...
    ಅಸ್ತಮಾ ಒಂದು ಕ್ಲಿಷ್ಟ ಆರೋಗ್ಯ ಸಮಸ್ಯೆ,,ಇದು ಪವಾಡವೆಂಬಂತೆ ಹಲವರಲ್ಲಿ ಗುಣವಾದ ನಿದರ್ಶನಗಳಿವೆ...

    ReplyDelete
  3. ಅನುಭವ ಕಥಾನಕವಿದು. ಅಸ್ತಮಾ ಖಾಯಿಲೆಯಿಂದ ನರಳಿ ಅನುಭವಿಸಿದ ನೋವುಗಳನ್ನು ನೇರವಾಗಿ ಭಟ್ಟಿ ಇಳಿಸಿದ್ದೀರಿ. ಅದರಲ್ಲೂ ಎಳೆಯ ವಯಸ್ಸಿನ ಮನದ ತುಮುಲಗಳು, ಹೇಳಲಾಗದ ನೋವಿನ ಎಳೆಯನ್ನು ಚನ್ನಾಗಿ ಬಿಡಿಸಿದ್ದೀರಿ. ಮಗಳನ್ನು ಉಳಿಸಿಕೊಳ್ಳಲು ತಂದೆಯು ಪಡುವ ಶ್ರಮ ಕಣ್ಣನ್ನು ಕಟ್ಟುತ್ತದೆ. ಬ್ಲಾಗಿನಲ್ಲಿ ಬರೆಯುವಾಗ ಸಾಧ್ಯವಾದಷ್ಟು ಕಪ್ಪು ಅಕ್ಷರದಲ್ಲೇ ಬರೆಯಿರಿ. ಓದುವುದಕ್ಕೆ ಸಹಕಾರಿಯಾಗುತ್ತದೆ. ಅಕ್ಷರಗಳ ಜೋಡಣೆ ಕ್ರಮ ಬದ್ಧವಾಗಿದ್ದರೆ ಓದಲು ಕುತೂಹಲವಿರುತ್ತದೆ. ಹಾಗೆಯೇ ಕಾಗುಣಿತ ದೋಷದ ಕಡೆಗೆ ಗಮನ ಹರಿಸಿ.

    ReplyDelete
  4. ಯಪ್ಫಾ ಅಕ್ಕಾ...
    ನಿಮ್ಮ ಅಪ್ಪಯ್ಯಗೊಂದು ಸಲಾಮ್...

    ReplyDelete
  5. Very neatly written.
    I can understand the pain of this, as my sister also suffering from the same!! :(
    Keep writing.

    ReplyDelete
    Replies
    1. nim sister gu yavdadru halliyalli kodo oushada kodsi.. kanditha guna aagatte.... nim sister ge bega guna aagli anta kelkottini...

      Delete
  6. ಇಷ್ಟ ಆತು ಅಕ್ಕ :)

    ನಿಮ್ಮ ಬ್ಲಾಗ್ ನಲ್ಲಿ ಓದ್ತಾ ಇರೋ ಮೊದಲ ಬರಹ ....

    ನಿಮ್ಮ ಪ್ರೀತಿಯ ಅಪ್ಪನಿಗೊಂದು ನಮನ :)

    ಬರೀತಾ ಇರಿ

    ReplyDelete
  7. ...... wonderful narration of both love and pain at the same time.....astangatavayitu astama......:)

    ReplyDelete
  8. ಸಖತ್ತಾಗಿ ಬರದ್ದಿ ಅಕ್ಕಾ..

    ನಿಮ್ಗೋಸ್ಕರ ಅಷ್ಟೆಲ್ಲಾ ಮಾಡಿದ ನಿಮ್ಮ ಅಪ್ಪಯ್ಯನಿಗೂ ಒಂದು ಸಲಾಂ..
    ದೇವ್ರು ನಿಂಗ್ಳನ್ನೆಲ್ಲಾ ಚನಾಗಿಟ್ಟಿರ್ಲಿ

    ReplyDelete