ಅಘನಾಶಿನಿ .....
ಅಘನಾಶಿನಿ ನಮ್ಮ ಮನೆಯ ಬಳಿ ಹರಿಯುವ ನದಿ ........ ನದಿಯ ಹೆಸರೇ ಇಷ್ಟು ಚೆನ್ನಾಗಿರುವಾಗ ನದಿ ಹೇಗಿರ ಬಹುದು? ಅಲ್ವಾ? ನಿಜವಾಗಲು ತುಂಬಾ ನೆನಪಿಸಿಕೊಳ್ತೀನಿ ಕಣೆ.. ಅದಕ್ಕೆ ನಿನ್ನ ಹೆಸ್ರ್ನೆ ಇಟ್ಟಿದಿನಿ ....
Tuesday, 18 February 2014
Monday, 30 December 2013
Monday, 1 April 2013
Saturday, 2 March 2013
ಅಪ್ಪ....
ಇಪ್ಪತ್ತು ವರ್ಷಗಳ ಹಿಂದಿನ ಮಾತು ..... ತೊದಲು ಮಾತನ್ನು ಕಲಿತಿದ್ದೆನಂತೆ.... "ಆsss ಯಿ.. ", "ಅಪ್ಪಾsss.." , "ಅಕ್ಕಾ ", "ಅಣ್ಣಾ "........ "ಅಬ್ಬೆ"(ಅಜ್ಜಿ).... ಎಂದೆಲ್ಲ ಹೇಳಿಕೊಂಡು ಎಲ್ಲರ ಮುದ್ದಿನ ಮಗುವಾಗಿದ್ದೆನಂತೆ ... ಅಬ್ಬೆಗೆ ನಾನು ಅಂದರೆ ಪ್ರಾಣವಾಗಿತ್ತಂತೆ. ದಿನವಿಡೀ ನನ್ನ ಆರೈಕೆಯಲ್ಲೇ ಕಾಲ ಕಳೆಯುತ್ತಿದ್ದ ಹಣ್ಣೆಲೆ ಆಗಿದ್ದಳಂತೆ. ಮೈತುಂಬಿಕೊಂಡಿದ್ದ ಮಗುವನ್ನು ಎತ್ತಿಕೊಳ್ಳಲು ಆಳುಕಾಳುಗಳು, ಪಕ್ಕದ ಮನೆಯವರು ಕಾಯುತ್ತಿದ್ದರಂತೆ. ಕೆಟ್ಟಕಣ್ಣು ಬೀಳುತ್ತದೆ ನನ್ನ ಮೊಮ್ಮಗಳಿಗೆ ಎಂದು ಸೆರಗಿನಲ್ಲಿ ಮುಚ್ಚಿಟ್ಟುಕೊಂಡು ಓಡಾಡುತ್ತಿದ್ದಳಂತೆ.
ಪಾಪ ದಮ್ಮುರೋಗ ಅಬ್ಬೆಯನ್ನು ಆವರಿಸಿತ೦ತೆ . ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಬ್ಬೆ ಕೊನೆಗಾಲವನ್ನು ಆಸ್ಪತ್ರೆಯಲ್ಲೇ ಕಳೆಯಬೇಕಾಯಿತಂತೆ... ಮನೆಗೆ ವಾಪಸ್ ಬರಲು ಹವಣಿಸುತ್ತಿದ್ದ ಜೀವಕ್ಕೆ ಮಗನಾದ "ದತ್ತಾತ್ರೇಯ " ಸಾಂತ್ವನ ಹೇಳುತ್ತಿದ್ದನಂತೆ. ಪಾಪ ಆ ಜೀವ ಮನೆಗೆ ಬರದೇ ಮಕ್ಕಳು ಮೊಮ್ಮಕ್ಕಳನ್ನು ನೆನೆಸಿಕೊಂಡು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆಯಿತಂತೆ...
ಅಂತ್ಯಕ್ರಿಯೆ ಮುಗಿಸಿದ ಮಕ್ಕಳು ಕಾಲಕ್ರಮೇಣ ದುಃಖವನ್ನು ಮರೆತರು. ಎಲ್ಲರು ಅವರವರ ಬದುಕಿನಲ್ಲಿ ತೊಡಗಿದರು. ಎರಡು ವರ್ಷದ ಮಗುವಾಗಿದ್ದ ನನಗೆ "ಆಸ್ತಮಾ" ಶುರುವಾಯಿತಂತೆ. ತಾಯಿಯನ್ನು ಬಲಿ ತೆಗೆದುಕೊಂಡ ರೋಗ ಮಗಳನ್ನು ಬಿಡುತ್ತಿಲ್ಲವಲ್ಲ ಎಂದು ನರಳಾಡಿತು ದತ್ತತ್ರಯನ ಮನಸ್ಸು.
ತಾಯಿಯನ್ನು ಕಳೆದುಕೊಂಡಾಗಿದೆ, ಚಿಗುರುತ್ತಿವ ಮೊಳಕೆಯನ್ನು ಚಿವುಟಲು ಬಿಡುವುದಿಲ್ಲ ಎಂದು ನಿರ್ಧರಿಸಿದ...
ಹಗಲು ರಾತ್ರಿಯೆನ್ನದೆ ಮಗಳನ್ನು ಆರೈಕೆ ಮಾಡಲು ತೊಡಗಿದ . ಹಳ್ಳಿಯ ಆಯುರ್ವೇದ ಕಶಾಯಗಳನ್ನೆಲ್ಲ ತಂದು ಕುಡಿಸಿ ಮಗಳ ಕಾಯಿಲೆಯನ್ನು ಸ್ವಲ್ಪ ಮಟ್ಟಿಗೆ ಗುಣಮುಖವಾಗುವಂತೆ ಮಾಡಿದ.
ರಾತ್ರಿಯೆಲ್ಲಾ ಮಡಿಲಲ್ಲಿ ಮಲಗಿಸಿಕೊಂಡು ಬಿಸಿನೀರ ಶಾಕ ಕೊಟ್ಟು ಉಸಿರಾಟ ಸಲೀಸಾಗುವಂತೆ ಮಾಡುತ್ತಿದ್ದ.
ಅಂತು ಇಂತೂ ನನಗೆ ಐದು ವರ್ಷ ಆಯಿತು .. ಶಾಲೆಗೆ ಹೆಸರು ಹಚ್ಚಿಸಿದ. ಆದರೆ ನಮ್ಮೂರಿನಲ್ಲಿ ಶಾಲೆ ಇಲ್ಲ... ನಾಲ್ಕು ಕಿಲೋಮೀಟರ್ ನಡೆದು ಹೋಗಬೇಕಿತ್ತು ... ನನ್ನ ಅನಾರೋಗ್ಯದ ಕಾರಣ ನನಗೆ ನಡೆಯಲು ಆಗುತ್ತಿರಲಿಲ್ಲ.. ಅದಕ್ಕಾಗಿ ಅಜ್ಜನ ಮನೆಯಲ್ಲಿ ನನ್ನನ್ನು ಬಿಟ್ಟು ಅಲ್ಲಿ ಹತ್ತಿರವಿದ್ದ ಶಾಲೆಗೇ ಸೇರಿಸಿದ.
ಆಗ ನನಗೆ ಅಸ್ತಮಾ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿತ್ತು . ಹದಿನೈದು ದಿನಕ್ಕೆ ಒಮ್ಮೆ ಕಾಣಿಸಿಕೊಳ್ಳುತ್ತಿತ್ತು. ನನಗೆ ಇನ್ನು ನೆನಪಿದೆ ಅವತ್ತಿನ ದಿನ ರಾತ್ರಿ .. ಸುಮಾರು ಹನ್ನೆರಡು ಗಂಟೆ ದಾಟಿರಬಹುದು .... ನನಗೆ ಉಸಿರಾಟ ಕಷ್ಟವಾಗಿತ್ತು... ಆಗ ಹಳ್ಳಿಗಳಲ್ಲಿ ಇನ್ನೂ ಫೋನಿನ ವ್ಯವಸ್ತೆ ಇರಲಿಲ್ಲ ... ಅಪ್ಪನಿಗೆ ಸುದ್ದಿ ಮುಟ್ಟಿಸುವುದು ಕಷ್ಟವಾಗಿತ್ತು ..ನನ್ನ ಮಾವ (ಅಮ್ಮನ ಅಣ್ಣ ) ಹತ್ತಿರದ "ನೆಲೆಮಾವಿಗೆ "(ಊರಿನ ಹೆಸರು ) ಹೋಗಿ ಅಲ್ಲಿ ಚಂದ್ರಶೇಕರ ಭಟ್ಟ ಎಂಬ ವೈದ್ಯರಿದ್ದರು ... ಅವರ ಬಳಿ ಕರೆದುಕೊಂಡು ಹೋಗಿ ತಾತ್ಕಾಲಿಕ ಚಿಕಿತ್ಸೆ ನೀಡಿಸಿದರು. ನಂತರ ಪರಿಸ್ತಿತಿ ಕೈ ಮೀರುವುದರೊಳಗೆ ವಾಹನದ ವ್ಯವಸ್ತೆ ಮಾಡಿ ಸಿರಸಿಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರು.
ಮರುದಿನ ಅಪ್ಪ ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋದ... ಆಗ ಎಲ್ಲಾ ಕಡೆ ವಿಚಾರಿಸಲು ತೊಡಗಿದ ಅಸ್ಥಮ ಕ್ಕೆ ಯಾವ ಯಾವ ಹಳ್ಳಿಗಳಲ್ಲಿ ಔಷಧ ಕೊಡುತ್ತಾರೆ ಎಂದು. ನಂತರ ನನ್ನನ್ನು ಅಜ್ಜನ ಮನೆಗೆ ಕಳಿಸಲಿಲ್ಲ. ಹಿತ್ಲಕೈ ಶಾಲೆಗೇ ಶಿಕ್ಷಕರನ್ನು ಕರೆತರಲು "BEO" ಕಚೇರಿಗೆ ಅಲೆದಾಟ ಆರಂಬಿಸಿದ.. ಅಂತು ಇಂತೂ ಅಪ್ಪನ ಪರಿಶ್ರಮಕ್ಕೆ ಬೆಲೆ ಸಿಕ್ಕಿತು... ಹಿತ್ಲಕೈ ಸರಕಾರಿ ಪ್ರಾಥಮಿಕ ಶಾಲೆ ಪ್ರಾರಂಭವಾಯಿತು. ಶಾಲೆಯ ಕತೆಯನ್ನು " ಶಾಲೆ ಮಾಸ್ತರು " ಶೆರ್ಷಿಕೆಯಡಿಯಲ್ಲಿ ಆಗಲೇ ಬರೆದಿದ್ದೇನೆ ...
ನಂತರ ಅಪ್ಪ ನನಗೆ ಎಲ್ಲ ಹಳ್ಳಿಗಳಲ್ಲಿ ಔಷದ ಗಳನ್ನೂ ಕೊಡಿಸಿದರು... ಒಂದೊಂದು ಔಷದಿಯು ಒಂದೊಂದು ರುಚಿ .... ಕೆಲವೊಂದು ಕಹಿ ... ಕೆಲವೊಂದು ಕೋಳಿಮೊಟ್ಟೆಯ ವಾಸನೆ ... ಕೆಲವೊಂದು ಖಾರ ... ಬೇಡ ಎಂದರು ಕೇಳದೆ ಬಾಯಿಗೆ "ಗೊಟ್ಟ " ಇಟ್ಟು ಕುಡಿಸುವ ನಾಟಿ ವೈದ್ಯರು ... ಅದರ ಮೇಲಿನಿಂದ
"ಪಥ್ಯ".... ಮೊಸರು ತಿನ್ನಬಾರದು, ಕರಿದ ಪದಾರ್ಥ ತಿನ್ನಬಾರದು, ಕೊನೆಗೆ ಬಾಳೆಹಣ್ಣು ತಿನ್ನಬಾರದು ....
ಮನೆಯಲ್ಲಿ ಹಬ್ಬಗಳಾದಾಗ ಅಳುವೇ ಬರುತ್ತಿತ್ತು .... ಎಲ್ಲರು ತಿನ್ನುತ್ತಾರೆ ನಾನು ಮಾತ್ರ "ಪಥ್ಯ "...... "ಗಣೇಶ ಹಬ್ಬ "ವಾಗಿತ್ತು .... ಆಯಿ ಚಕ್ಕುಲಿ ಮಾಡುತ್ತಿದ್ದಳು ... ತುಂಬಾ ಆಸೆಯಾಗಿ ಯಾರೂ ಇಲ್ಲದ ಹೊತ್ತಿನಲ್ಲಿ ಎರಡು ಚಕ್ಕುಲಿ ತೆಗೆದು ತಿಂದುಬಿಟ್ಟೆ... ಅಪ್ಪ ತೋಟಕ್ಕೆ ಹೋಗಿದ್ದರು .... ನನಗೆ ಉಸಿರಾಟದ ತೊಂದರೆ ಶುರು ...... ಎಷ್ಟು ತೀವ್ರವಾಗಿತ್ತೆಂದರೆ ಉಸಿರಾಟ ನಿಂತು ನಿಂತು ಆಗುತ್ತಿತ್ತು ... ಏನೇ ಮಾಡಿದರು ನಿಯಂತ್ರಣಕ್ಕೆ ಬರಲಿಲ್ಲ.. .. ಆಗ ನಮ್ಮೂರಿಗೆ ಬಸ್ಸಿನ ವ್ಯವಸ್ತೆ ಇರಲಿಲ್ಲ ... ಅಘನಾಶಿನಿ ನದೀ ದಾಟಿ ಐದು ಕಿಲೋಮೀಟರ್ ನಡೆದರೆ ಅಲ್ಲಿಂದ ಸಿರ್ಸಿ ಗೆ ಹೋಗಲು ಬಸ್ ಸಿಗುತ್ತಿತ್ತು ...
ಅಪ್ಪ ತೋಟದಿಂದ ಬಂದವರೇ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ನದಿ ದಾಟಿ ನಡೆದು ಕೊಂಡೆ ಹೋಗಿ ಆಸ್ಪತ್ರೆಗೆ ಸೇರಿಸಿದರು ... ಒಂದು ವಾರದ ನಂತರ ನನ್ನ ಅರೋಗ್ಯ ಸುಧಾರಿಸಿತು ... ನಂತರ " ನೆರ್ಲಮನೆ " ಯಲ್ಲಿ ಒಬ್ಬರು ಡಾಕ್ಟರ್ ಇದ್ದರು .. ಅವರು ಇಂಗ್ಲೆಂಡಿನಲ್ಲಿ ಡಾಕ್ಟರ ಆಗಿ ಕೆಲಸ ಮಾಡುತ್ತಿದ್ದರು ... ಅವರ ಬಳಿ ಚಿಕಿತ್ಸೆ ನೀಡಿಸಿದರು ... ನಂತರ ಒಂದು ಔಷದದ ಶೀಶೆ ನನ್ನ ಬಳಿ ಯಾವಾಗಲು ಇಟ್ಟುಕೊಂಡಿರಲು ಹೇಳಿದರು ... ಉಸಿರಾಟಕ್ಕೆ ತೊಂದರೆ ಆದ ತಕ್ಷಣ ಅದನ್ನು ಬಾಯಿಗೆ ಸ್ಪ್ರೇ ಮಾಡಿಕೊಳ್ಳಲು ಹೇಳಿದರು .... ಇದರಿಂದ ನನ್ನ ಉಸಿರಾಟದ ತೊಂದರೆಗೆ ಪರಿಹಾರ ಸಿಕ್ಕಿತು , ಆದರೆ ಔಷದ ಹೃದಯಕ್ಕೆ ಹಾನಿ ಮಾಡಲು ಪ್ರಾರಂಭಿಸಿತ್ತು ... !!!!
ಮತ್ತೆ ಅಪ್ಪನಿಗೆ ಚಿಂತೆ ಶುರು .... ಮಗಳನ್ನು ಕಾಪಾಡಬೇಕು... ಎಲ್ಲ ದೇವರಿಗೂ ಹರಕೆ ಹೊತ್ತರು ... ಯಾವಾಗಲು ಅಪ್ಪನ ಮಡಿಲಲ್ಲೇ ಮಲಗುತ್ತಿದ್ದೆ ... ಆಯಿ ತುಂಬಾ ಭಾವುಕಳು ... ಅವಳಿಗೆ ನನ್ನ ಪರಿಸ್ತಿತಿ ಅಳುವನ್ನೇ ತರುತ್ತಿತ್ತು ... ಆಯಿಗೆ ಸಮಾಧಾನ ಹೇಳುತ್ತಿದ್ದೆ "ನನಗೆ ಎಂತೂ ಆಗ್ತಿಲ್ಲೆ ಆಯಿ ... ಅಪ್ಪ ನಂಗೆ ಎಂತ ಆಗಲು ಬಿಡ್ತ್ನಿಲ್ಲೇ .." ನನ್ನ ಅಪ್ಪನ ಮೇಲೆ ಅಷ್ಟು ನಂಬಿಕೆ ... ಮತ್ತೆ ಹಳ್ಳಿ ಔಷದಿಯ ಮೊರೆ ಹೋಗಿದ್ದೆವು .... ಆಗ ನಾನು 9 ನೇ ತರಗತಿ ಓದುತ್ತಿದ್ದೆ ..." ಹಲಸಿನ ಹಳ್ಳಿ " ಎಂಬಲ್ಲಿ ಗೆ ಕರೆದು ಕೊಂಡು ಹೋಗಿ ಸೊಪ್ಪಿನ ಔಷದಿ ಕುಡಿಸಿದರು ... ನನ್ನ ಅಪ್ಪನ ಪರಿಶ್ರಮಕ್ಕೆ ಅಲ್ಲಿ ಬೆಲೆ ಸಿಕ್ಕಿತು .... ನನ್ನ ಅಸ್ಥಮ ಒಂದು ವಾರಕ್ಕೆ ಸಂಪೂರ್ಣವಾಗಿ ಮಾಯಾ ... ನಾನು ಮೊಸರು ತಿನ್ನುತ್ತಿದ್ದೆ , ಕರಿದದ್ದು ತಿಂದೆ ಏನು ಆಗಲೇ ಇಲ್ಲ ........
ಅಪ್ಪ ಎಲ್ಲ ಜನ್ಮದಲ್ಲೂ ನೀನೆ ನನ್ನ ಅಪ್ಪ ಆಗಿರು ಎಂದು ಬಯಸುತ್ತೇನೆ ...ನಾನು ಇವತ್ತು ಖುಷಿಯಿಂದ ಜೀವನ ನಡೆಸುತ್ತ ಇದ್ದೀನಿ ಅಂದ್ರೆ ಅದಕ್ಕೆ ನೀನೆ ಕಾರಣ ... ಪ್ರತ್ಯಕ್ಷ ದೇವರು .... ನಾನು ದೇವರನ್ನು ನಂಬುವುದಕ್ಕಿಂತ ಜಾಸ್ತಿ ಅಪ್ಪನನ್ನು ನಂಬುತ್ತೇನೆ ... ಇಷ್ಟು ಒಳ್ಳೆ ಅಪ್ಪನನನ್ನು ನನಗೆ ಕೊಟ್ಟಿದ್ದಕ್ಕೆ ದೇವರಿಗೂ ಒಂದು ಥ್ಯಾಂಕ್ಸ್ ...................
Thursday, 10 January 2013
Tuesday, 1 January 2013
ಓತಿಕ್ಯಾತ
ಶಾಲೆಯಲ್ಲಿ ಎಲ್ಲಾ ಮಕ್ಕಳಿಗೂ ಲೀಡರ್ ನಾನಾಗಿದ್ದೆ, ಎಲ್ಲರ ಹತ್ತಿರವೂ ಕೆಲಸ ಮಾಡಿಸುತ್ತಿದ್ದೆ. ಕಸ ಹೆಕ್ಕಿಸುವುದು, ನೀರು ತರಿಸುವುದು, ಹೀಗೆ ಚಿಕ್ಕ ಪುಟ್ಟದ್ದನ್ನೆಲ್ಲ ಮಾಡಿಸುತ್ತಿದ್ದೆ. ಮೊದ ಮೊದಲೂ ಎಲ್ಲಾರೂ ಸಮನ್ವಯಕ್ಕ ಹೇಳಿದ್ದು ಅಂದ್ರೆ ಶ್ರಧ್ಧೆಯಿಂದ ಮಾಡ್ತಾ ಇದ್ರು. ಕೊನೆ ಕೊನೆಗೆ ಅವರೂ ದೊಡ್ಡವರಾದ ಹಾಗೆ ನಾವೇಕೆ ಮಾಡಬೇಕು….? ಎನಿಸಲು ಶುರುವಾಯಿತು.
ಶಾಲೆಯಲ್ಲಿ ನಾನು ಮಹಾರಣಿಯಾಗಿದ್ದೆ, ನನ್ನ ಹಿಂದಿನಿಂದ ನನಗೆ “ಹಾವುರಾಣಿ” ಎಂದು ಹೆಸರಿಟ್ಟರು…..!!!! ಮಕ್ಕಳು ಎಷ್ಟು ಬೇಗ ಬದಲಾಗುತ್ತಾರೆ ನೋಡಿ….
ಒಂದು ದಿನ ಉಳಿದ ಮಕ್ಕಳೆಲ್ಲ ಒಟ್ಟಾಗಿಕೊಂಡು “ಸಮನ್ವಯಕ್ಕ ನೀನೂ ಕಸ ಹೆಕ್ಕು ನಂಗಳ ಸಂತಿಗೆ” ಎಂದರು. ನನಗೆ ಆಗ ತಿಳಿಯಿತು. ಮಹಾರಾಣಿಯ ದರ್ಬಾರು ಮುಗಿಯಿತು, ಇನ್ನು ನಾನೂ ಇವರ ಜೊತೆ ಕೆಲಸ ಮಾಡಬೇಕು, ಎಂದು…
ಆಯಿತು ಎಂದು ಕಸ ಹೆಕ್ಕಲು ಶುರು ಮಾಡಿದೆ. ಕಸಹೆಕ್ಕುವಾಗ, ಒಂದು “ಓತಿಕ್ಯಾತ “ ನನ್ನ ಕೈಗೆ ಕಚ್ಚಿದಂತಾಯಿತು… (ಬಹುಶಃ ತಾಗಿರಬೇಕು) ನಾನು ಅಳಲು ಶುರು ಮಾಡಿದೆ. “ನಂಗೆ ಓತಿಕ್ಯಾತ ಕಚ್ಚಿದೆ, ನೀವೆಲ್ಲಾ ಅದನ್ನು ಹೊಡೆದು ಕೊಲ್ಲಬೇಕು…”
ಆಗ ಅವರೆಲ್ಲಾ ಮಹಾರಾಣಿಯ ಆಜ್ಞೆಯನ್ನು ಪಾಲಿಸುವ ಸೈನಿಕರಂತೆ ಕೋಲು ಕಲ್ಲುಗಳನ್ನು ಹಿಡಿದು. ಓತಿಕ್ಯಾತವನ್ನು ಓಡಿಸಿಕೊಂಡು ಹೋಗಿ ಕೊಂದರು. ಅವರಿಗೆಲ್ಲಾ, ಏನೋ ಸಾಧಿಸಿದ್ದೇವೆ ಎಂಬ ಹೆಮ್ಮೆ. ನಂತರ ಓತಿಕ್ಯಾತದ ಕುತ್ತಿಗೆಗೆ ದಾರ ಕಟ್ಟಿ ಮರಕ್ಕೆ ನೇತು ಹಾಕಿ, ಶಾಲೆಯ ಒಳಗೆ ಹೋದೆವು.
ಮಧ್ಯಾಹ್ನ ಶಾಲೆ ಬಿಟ್ಟಾಗ ಬಂದು ನೋಡಿದರೆ, ಓತಿಕ್ಯಾತ ಮಾಯ…….!!!!! ದಾರ ಮಾತ್ರ ನೇತಾಡುತಿತ್ತು…. ನಮಗೆಲ್ಲಾ ಭಯ… ಮಕ್ಕಳೆಲ್ಲಾ ಸೇರಿ “ಓತಿಕ್ಯಾತ ಭೂತ ಆಗೋಜು, ಸಮಕ್ಕ ಅದು ನಿನ್ನ ಮೇಲೆ ಸೇಡು ತೀರಿಸಿಕೊಳ್ತು… ತಡೀ….” ಎಂದು ನನ್ನ ಹೆದರಿಸಿದರು….
ನನಗೆ ಭಯವೋ ಭಯ…
ಒಂದು ತಿಂಗಳ ನಂತರ, ನಾವೆಲ್ಲಾ ಶಾಲೆ ಮುಗಿಸಿ, ಸಂಜೆ ಮನೆಗೆ ಬರುತ್ತಾ ಇದ್ದೆವು… ದಾರಿಯಲ್ಲಿ, ಮತ್ತೆ ಓತಿಕ್ಯಾತ ಪ್ರತ್ಯಕ್ಷ…!!! ಎಲ್ಲಾ ಮಕ್ಕಳೂ, “ಸಮಕ್ಕಂಗೆ ಕಚ್ಚಿದ ಓತಿಕ್ಯಾತ ಮತ್ತೆ ಬಂಜು……” ಎಂದು ಕಿರುಚಿ, ಕಲ್ಲುಕಳನ್ನು ಎತ್ತಿ, ಓತಿಕ್ಯಾತಕ್ಕೆ ಎಸೆಯಲು ಶುರುಮಾಡಿದರು… ಪಾಪ ಆ ಓತಿಕ್ಯಾತ ಭಯದಿಂದ, ಹತ್ತಿರವಿದ್ದ ಗಿಡವನ್ನು ಹತ್ತಿತು… ಕೋಲುಗಳನ್ನು ಹಿಡಿದು, ಎಲ್ಲರೂ ಓತಿಕ್ಯಾತವನ್ನು ಹೊಡೆಯಲು ಮರದ ಬಳಿ ಹೋದರು… ನಂಗೆ ಭಯ.. ಸ್ವಲ್ಪ ದೂರದಲ್ಲಿ ನಿಂತು ಇದೆಲ್ಲವನ್ನು ನೋಡುತಿದ್ದೆ… ಆಗ, ಸವಿ “ ಅಕ್ಕಾ, ನೀನು ಕಲ್ಲು ಎಸಿ, ಅದನ್ನು ನೀನೂ ಸಾಯಿಸಬೇಕು” ಎಂದಳು…
ನಾನು ಟಾರ್ ರೋಡಿನ ಪಕ್ಕದಲ್ಲಿದ್ದ, ಸ್ವಲ್ಪ ದೊಡ್ಡ ಜಲ್ಲಿ ಕಲ್ಲನ್ನು ಎತ್ತಿ ಗಿಡದ ಕಡೆ ಎಸೆದೆನು, ಅದು ನಾಗರಾಜನ ಹಣೆಗೆ ತಾಗಿತು…ರಕ್ತ ಸುರಿಯ ತೊಡಗಿತು…ಅವನು ನಮ್ಮ ಮನೆಯ ಕೆಲಸಕ್ಕೆ ಬರುವ ರಾಮನ ಮಗ.. ರಾಮ, ನನ್ನ ಅಪ್ಪನ ಹತ್ತಿರ ಹೇಳಿದರೆ, ನನಗೆ ಛಡಿ ಏಟು ಖಂಡಿತ,….ಏನು ಮಾಡುವುದು ಎಂದು ಭಯ…
ಆಗ ನನ್ನ ಸಹಾಯಕ್ಕೆ ಬಂದಿದ್ದು, “ಕಾಂಗ್ರೆಸ್ ಸೊಪ್ಪು”…. (ಪಾರ್ಥೆನಿಯಂ ಗಿಡ) ಅದನ್ನು ಕಲ್ಲಿನ ಮೇಲಿಟ್ಟು ಜಜ್ಜಿ, ಸೊಪ್ಪನ್ನು ಹಣೆಗೆ ಒತ್ತಿ ಹಿಡಿದೆನು… ರಕ್ತ ಬರುವುದು ಸ್ವಲ್ಪ ಕಡಿಮೆ ಆಯಿತು… ನಂತರ ಸಿನಿಮಾದಲ್ಲಿ ಸೀರೆಯ ತುದಿಯನ್ನು ಹರಿದು ಪಟ್ಟಿ ಕಟ್ಟುವುದನ್ನು ನೋಡಿದ್ದೆನು… ನನ್ನ ಪ್ರಾಕಿನ, ಬಾಲವನ್ನು ಕತ್ತರಿಸಿ, ಅವನ ಹಣೆಗೆ ಪಟ್ಟಿ ಕಟ್ಟಿ, ಬೆಟ್ಟದ ದಾರಿಯಿಂದ ಅವನ ಮನೆಗೆ ಕಳಿಸಿದೆವು…ಊರಿನ ದಾರಿಯಲ್ಲಿ ಯಾರಾದರೂ ನೋಡಿದರೆ, ನಾನು ಅಪ್ಪನ ಬಳಿ ಹೊಡೆತ ತಿನ್ನಬೇಕಲ್ಲಾ, ಎಂದು…
ಪಾಪ ನಾಗರಾಜ, ಯಾರ ಬಳಿಯೂ, ನಾನು ಕಲ್ಲು ಎಸೆದು ಹಾಗಾಯಿತು ಎಂದು ಬಾಯಿ ಬಿಡಲೇ ಇಲ್ಲ…
ಬಿದ್ದು ಪೆಟ್ಟಾಯಿತು ಎಂದು, ಸುಳ್ಳು ಹೇಳಿ ನನ್ನನ್ನು ಬಚಾವ್ ಮಾಡಿದ್ದ…
ಓತಿಕ್ಯಾತದ ಅವಾಂತರ ಇಷ್ಟೆಲ್ಲಾ ಆಗಿತ್ತು…
ಅಂದಿನಿಂದ, ಯಾವ ಓತಿಕ್ಯಾತದ ತಂಟೆಗೂ ಹೋಗಲಿಲ್ಲ….
Monday, 31 December 2012
ಹೊಸ ವರ್ಷ… ಹೊಸ ಹರ್ಷ….
ಹೊಸ ವರ್ಷ ಬರುತ್ತದೆ….
ಹಳೆಯದಾಗಿ ಮತ್ತೆ ಹೊಸ ವರ್ಷ…
ಆದರೆ ಎಂದಿಗೂ ಮರೆಯಲಾಗದ….
ಮನಸ್ಸಿನಾಳದ….
ಎಂದೋ ಹೇಳಬೇಕಿದ್ದ….
ಎಂದೆಂದಿಗೂ ನವೀನತೆ ಕೊಡುವ….
ಎರಡಕ್ಷರದ “ಪ್ರೀತಿ”….
ಬಾಳಲ್ಲಿ ಹೊಸವರ್ಷದ ಜೊತೆಗೆ…
ಹೊಸ ಹರ್ಷವನ್ನೂ ತಂದು…
ಹೊಸ ಜೀವನವನ್ನು ಕೊಟ್ಟಿದೆ…
ಹೊಸ ವರ್ಷದ ಶುಭಾಷಯ….
ನಿರೀಕ್ಷಿಸಿದ ಮನಸಿಗೆ….
ಹೊಸ ಜೀವನವೇ ಹುಡುಕಿ ಬಂದಿದೆ…
ಧನ್ಯವಾದ ಸುದರ್ಶನ…
ನನ್ನ ನಗುವನ್ನು…
ಪುನಃ ನನಗೆ ತಂದುಕೊಟ್ಟಿದ್ದಕ್ಕೆ…
ನನ್ನೊಳಗಿನ ನನ್ನನ್ನು ಹೊರತಂದಿದ್ದಕ್ಕೆ…
ನನ್ನ ಮನಸ್ಸಿನ ಪ್ರೀತಿಯನ್ನು
ನಿರೂಪಿಸಿದ್ದಕ್ಕೆ….
ನನ್ನೆಲ್ಲಾ ನಗು, ಸಂತೋಷಕ್ಕೆ….
ಕಾರಣ ನೀನು….
ಯಾವಾಗಲೂ ನೀನೇ ಕಣೊ
Sunday, 18 November 2012
ಶಾಲೆ ಮಾಸ್ತರು – 3
ನಮಗೆ ಶಾಲೆ ಅಂದ್ರೆ, ಭಯವೇ
ಹೋಗಿ ಬಿಟ್ಟಿತ್ತು. . . . ಹೊಸ ಮಾಸ್ತರು ಬರ್ತಾರೆ, ಬಿಟ್ಟು ಹೊಗ್ತಾರೆ, ಇದೇ ಹಣೆಬರಹ… ನಮಗೆ ಪಾಠ
ಹೇಳಿ ಕೊಡುವಷ್ಟು ತಾಳ್ಮೆ, ಈ ಊರಿಗೆ ಹೊಂದಿಕೊಳ್ಳುವ ಮನೋಭಾವ ಯಾವ ಮಾಸ್ತರಿಗೂ ಇಲ್ಲ ಎನ್ನುವುದು,
ನಮಗೆಲ್ಲಾ ಖಚಿತವಾಗಿತ್ತು…….ಆದರೂ ಒಂದು ಸಣ್ಣ ನಿರೀಕ್ಷೆ………
ಅಂತೂ ಇಂತೂ ನಾವು ಮೂರನೇ ಕ್ಲಾಸ್,
ಆವಾಗ ನಮಗೆ ಹೊಸದಾಗಿ ಬಂದ ಮಾಸ್ತರೇ “ನಾಯ್ಕ್ ಮಾಸ್ತರು”….. ಭಾರಿ ಒಳ್ಳೆಯ ಗುಣ, ಬಡತನದಲ್ಲಿ ಓದಿ
ಬೆಳೆದಿದ್ದರು. ಒಳ್ಳೆಯ ಮಾತುಗಾರರು, ನೈತಿಕತೆ ಉಳ್ಳವರು. ಒಟ್ಟಿನಲ್ಲಿ ಹೇಳಬೇಕೆಂದರೆ, ಆದರ್ಶ ಶಿಕ್ಷಕ
ಪ್ರಶಸ್ತಿಗೆ ಅತ್ಯುತ್ತಮ ಅರ್ಹತೆಯುಳ್ಳವರಾಗಿದ್ದರು.
ನಮ್ಮನ್ನೆಲ್ಲಾ ಅವರ ಮಕ್ಕಳಂತೆ
ನೋಡಿಕೊಳ್ಳುತ್ತಿದ್ದರು. ಪಾಲಕರನ್ನು ವಾರಕ್ಕೆ ಒಂದು ಬಾರಿ ಭೇಟಿ ಮಾಡಿ ಮಕ್ಕಳ ಅಭ್ಯಾಸದ ಪ್ರಗತಿಯ
ಬಗ್ಗೆ ಚರ್ಚಿಸುತ್ತಿದ್ದರು. ನಮಗೆಲ್ಲಾ ಆಗಲೇ ಶಾಲೆಯೆಂದರೆ ಏನು……? ಶಿಕ್ಷಕರ ಜವಾಬ್ದಾರಿ ಏನು ಎಂದು
ಅರ್ಥವಾಗಿದ್ದು. ಶಾಲೆಯಲ್ಲಿ ಶಾರದಾ ಪೂಜೆ ನಡೆಸಲು ಪ್ರಾರಂಭಿಸಿದರು. ನಮಗೆ ಶಾಲೆಯೆಂದರೆ ಖುಷಿ, ಭಾನುವಾರ
ಯಾಕಾದರೂ ರಜಾ ಬರುತ್ತೊ ಅನ್ನುವಷ್ಟು ಬೇಜಾರಗುತ್ತಿತ್ತು.
ನಾಯ್ಕ್ ಮಾಸ್ತರಿಗೆ, ಮಕ್ಕಳು ಚೆನ್ನಾಗಿ
ಅಕ್ಷರ ಬರೆಯಲಿ ಎಂಬ ಆಸೆ ಇತ್ತು. ನಮ್ಮದೆಲ್ಲಾ, ಕಾಗೆ ಕಾಲು, ಗುಬ್ಬಿ ಕಾಲಿನ ಅಕ್ಷರ. ಅದಕ್ಕಾಗಿ
ಅವರು ಜೋಡಿ ಗೆರೆ ಪಟ್ಟಿ ತೆಗೆಯದುಕೊಂಡು ದಿನಾಲೂ ಒಂದೊಂದು ಪುಟ ಬರೆಯಲು ಹೇಳಿದರು. ನಾವು ಜೋಡಿಗೆರೆ
ಪಟ್ಟಿಯಲ್ಲೂ ಕಾಗೆಕಾಲಿನ ಅಕ್ಷರವನ್ನೇ ಬರೆಯುತ್ತಿದ್ದೆವು. ನಮ್ಮ ಪಟ್ಟಿ ನೋಡಿದ ಮಾಸ್ತರು, “ನಾಳೆ ದುಂಡಗೆ ಬರೆದುಕೊಂಡು ಬನ್ನಿ, ಇಲ್ಲ್ದೆ ಇದ್ರೆ ಶಾಲೆ ಹೊರಗೆ ಕಳಿಸ್ತೇನೆ” ಎಂದರು.
ನಾನು ಮನೆಗೆ ಹೋಗಿ, ಕಷ್ಟಪಟ್ಟು
ಗುಂಡಗಿನ ಅಕ್ಷರಗಳನ್ನು ಪಟ್ಟಿಯ ಮೇಲೆ ಮೂಡಿಸಿದೆ, ಆಟವಾಡಲು ಪಕ್ಕದ ಮನೆಗೆ ಹೋಗುವುದು ನನ್ನ ಅಭ್ಯಾಸ.
ಅಲ್ಲಿ ಹೋದರೆ, ನನ್ನ ಗೆಳೆಯ ಕೋಣೆಯ ಬಾಗಿಲು ಹಾಕಿಕೊಂಡು ಬರೆಯುತ್ತಿದ್ದಾನೆ. “ಬಾಗಿಲು ತೆಗಿಯೋ, ನಾ ಆಟ ಆಡಲೆ ಬಂದಿ” ಎಂದರೆ, ಅವನು “ ನಾ ಬಾಗ್ಲ ತೆಗಿತ್ನಿಲ್ಲೆ,
ನೀ ನಂಗೆ ಶೇಮ್ ಶೇಮ್ ಮಾಡ್ತೆ” ಎಂದ. ನಂಗೆ ಆಶ್ಚರ್ಯ!!!!!!!!.....
“ನೀ ಬರಿತಾ ಇದ್ರೆ ನಾ ಎಂತಕ್ಕೆ ಶೆಮ್ ಶೇಮ್ ಮಾಡ್ಲಿ…..?” ಎಂದೆ….
ಆಗ ಒಳಗಿನಿಂದ ಧ್ವನಿ ಬಂತು “ಮಾಸ್ತರು ದುಂಡಗೆ ಬರೆಯಲೆ ಹೇಳಿದ್ರಿಲ್ಯ……? ಅದಕ್ಕೆ ನಾನು ಬಟ್ಟೆ ಬಿಚ್ಕಂಡು
ದುಂಡಗೆ ಬರಿತಾ ಇದ್ದಿ…….” ಅವನ ಮಾತು ಕೇಳಿ ನನಗೆ ನಗು ತಡೆಯಲಾಗಲಿಲ್ಲ.
ಬಿದ್ದು ಬಿದ್ದು ನಕ್ಕೆನು…. ಆಮೇಲೆ ಅವನಿಗೆ “ದುಂಡಗೆ” ಎಂದರೆ “ಗುಂಡಗೆ” “ರೌಂಡ್ ರೌಂಡಾಗಿ” ಎಂದು ಅರ್ಥ ಮಾಡಿಸುವುದರಲ್ಲಿ ಸಾಕೋ ಬೇಕಾಯಿತು…..
ಮರುದಿನ ಮಾಸ್ತರಿಗೂ ಈ ವಿಷಯವನ್ನು
ಹೇಳಿದೆವು.... ಅವರಿಗೂ ನಗು, ನಮ್ಮ ಹಳ್ಳಿ ಮಕ್ಕಳ ಮುಗ್ದತೆಗೆ ನಗಬೇಕೋ ಅಳಬೇಕೋ ತೊಚದಾಯಿತು…..
Friday, 16 November 2012
ಶಾಲೆ ಮಾಸ್ತರು - 2
ಹಳೆ ಮಾಸ್ತರು ಬಿಟ್ಟು ಹೋದ ಖುಷಿ ಜಾಸ್ತಿ ದಿನ ಉಳಿಯಲಿಲ್ಲ. ಮತ್ತೆ ಹೊಸ ಮಾಸ್ತರು
ಬರುವ ಸುದ್ದಿ ಖಚಿತವಾಯ್ತು. ಈ ಸಾರಿ ಮಾಸ್ತರನ್ನು ಸ್ವಾಗತ ಮಾಡ್ಲಿಕ್ಕೆ, ಊರವರು ಬರಲಿಲ್ಲ. ನಾವು
ದೈನಂದಿನಂತೆ ಇಸ್ತ್ರಿ ಇಲ್ಲದ ಅಂಗಿ, ಹಳೆ ಪಾಠಿಚೀಲ, ಮೂಗಿನಲ್ಲಿ ಒಸರುವ ಸಿಂಬಳದೊಂದಿಗೆ ಶಾಲೆ ಮೆಟ್ಟಿಲ
ಮೇಲೆ ಕುಳಿತಿದ್ವಿ.
ಬಸ್ ಬಂತು, ಮಾಸ್ತರು ಬರಲೇ ಇಲ್ಲ….!
ಇನ್ನು ಅರ್ಧತಾಸು ಆಟ ಆಡಿಕೊಂಡು ಮನೆಗೆ ಹೋದರಾಯಿತು ಎಂದು “ಕಂಬಕಂಬದಾಟ” ಆಡಲು ಶುರು ಮಾಡಿದೆವು. ಹತ್ತು ನಿಮಷದಲ್ಲಿ ಒಂದು “ಲೂನಾ” ಮೋಟರ್ ಸೈಕಲ್ ಶಾಲೆಯ ಮೆಟ್ಟಿಲ ಬಳಿ ಬಂದು ನಿಂತಿತು. ಮೋಟರ್ ಸೈಕಲ್ ನಿಂದ ಇಳಿದ ಆಸಾಮಿ ನೋಡಲು ಕರ್ರಗೆ, ಡಾಕು ತರ ಇದ್ದ. ನಮಗೆಲ್ಲಾ ಭಯ. . .ಕಾಲಲ್ಲಿ ಇದ್ದ ಗೆಜ್ಜೆಯನ್ನು, ಕಿವಿಯೋಲೆಯನ್ನು ಬೇಗ ಬೇಗ ಕಳಚಿ, ಪಾಠಿ ಚೀಲದೊಳಗೆ ತುಂಬಿಕೋಡೆವು. ಯಾವುದೋ ಕಳ್ಳನಿರಬೇಕೆಂದು ಹತ್ತಿರದಲ್ಲಿದ್ದ ಕೋಲನ್ನು ಕೈಯಲ್ಲಿ ಹಿಡಿದು ಬೆನ್ನ ಹಿಂದೆ ಅಡಗಿಸಿಟ್ಟುಕೊಂಡೆವು.
ಇನ್ನು ಅರ್ಧತಾಸು ಆಟ ಆಡಿಕೊಂಡು ಮನೆಗೆ ಹೋದರಾಯಿತು ಎಂದು “ಕಂಬಕಂಬದಾಟ” ಆಡಲು ಶುರು ಮಾಡಿದೆವು. ಹತ್ತು ನಿಮಷದಲ್ಲಿ ಒಂದು “ಲೂನಾ” ಮೋಟರ್ ಸೈಕಲ್ ಶಾಲೆಯ ಮೆಟ್ಟಿಲ ಬಳಿ ಬಂದು ನಿಂತಿತು. ಮೋಟರ್ ಸೈಕಲ್ ನಿಂದ ಇಳಿದ ಆಸಾಮಿ ನೋಡಲು ಕರ್ರಗೆ, ಡಾಕು ತರ ಇದ್ದ. ನಮಗೆಲ್ಲಾ ಭಯ. . .ಕಾಲಲ್ಲಿ ಇದ್ದ ಗೆಜ್ಜೆಯನ್ನು, ಕಿವಿಯೋಲೆಯನ್ನು ಬೇಗ ಬೇಗ ಕಳಚಿ, ಪಾಠಿ ಚೀಲದೊಳಗೆ ತುಂಬಿಕೋಡೆವು. ಯಾವುದೋ ಕಳ್ಳನಿರಬೇಕೆಂದು ಹತ್ತಿರದಲ್ಲಿದ್ದ ಕೋಲನ್ನು ಕೈಯಲ್ಲಿ ಹಿಡಿದು ಬೆನ್ನ ಹಿಂದೆ ಅಡಗಿಸಿಟ್ಟುಕೊಂಡೆವು.
ಅವನು ಲೂನಾದಿಂದ ಇಳಿದು. ನಮ್ಮಕಡೆ
ನೋಡಿ “ಎಯ್,….ಹುಡುಗುರ್ರಾ ನಾನು ನಿಮ್ಮ ಇಸ್ಕೂಲಿಗೆ ಬಂದಿರೋ ಮೆಷ್ಟ್ರು… ನನ್ ಬೈಕ್
ಮೇಲಕ್ ಹತ್ತಸ್ರ್ರಲಾ….” ಎಂದರು.ನಮ್ಮ ಶಾಲೆ, ಶಬರಿ ಮಲೆಯ ಅಯ್ಯಪ್ಪನ
ಸನ್ನಿಧಾನವಿದ್ದಂತೆ, ಅಯ್ಯಪ್ಪನನ್ನು ನೋಡಲು ಹದಿನೆಂಟು ಮೆಟ್ಟಿಲುಗಳಾದರೆ,
ನಮ್ಮ ಶಾಲೆಗೆ, ಇಪ್ಪತ್ತೆಂಟು ಮೆಟ್ಟಿಲುಗಳು…..!
ಆಗೆಲ್ಲಾ ಶಾಲೆಗಳಲ್ಲಿ, ಹಲಗೆಗಳೇ ಬೆಂಚುಗಳಾಗಿದ್ದವು. ಎರಡು ಇಂಚು ದಪ್ಪ,
ಆರು ಪೂಟು ಉದ್ದ ಇರುತ್ತಿತ್ತು. ನಮ್ಮ ಶಾಲೆಯಲ್ಲಿ ಮೂರು ಬೆಂಚುಗಳಿದ್ದವು. ನಾವು ಕೈಲ್ಲಿದ್ದ ದೊಣ್ಣೆಯನ್ನು
ಪಕ್ಕಕ್ಕೆಸದು, ಬೇಗ ಬೇಗ ಶಾಲೆಯೊಳಗೆ ಹೋದೆವು. ಎರೆಡೆರಡು ಜನ ಒಂದೊಂದರಂತೆ, ಬೆಂಚನ್ನು ಎತ್ತಿ
ತಂದು ಮೆಟ್ಟಿಲಿನ ಮೇಲೆ ಜಾರು ಬಂಡಿಯನ್ನು ಮಾಡಿದೆವು. ಆಮೇಲೆ ಎಲ್ಲರೂ ಸೇರಿ, ಮಾಸ್ತರರ ಪಲ್ಲಕ್ಕಿಯನ್ನು
“ ಒತ್ರೊಪ್ಪೋ ……….. ಒತ್ತಿ…………..” ಎನ್ನುತ್ತಾ ಮೇಲಕ್ಕೆ ಹತ್ತಿಸಿದೆವು..
ಮಾಸ್ತರು ನೋಡಲು ಮಾತ್ರ ಗಡಸು, ಆದರೆ ಮೃದು ಸ್ವಭಾವದವರಾಗಿದ್ದರು. ಬೆತ್ತವೂ ಇರಲಿಲ್ಲ….ಬೈಗುಳಗಳೂ
ಇರಲಿಲ್ಲ…..ಮಾಸ್ತರು ಮಂಡ್ಯದವರಾಗಿದ್ದರು. ಜಾಸ್ತಿ
ಗಲಾಟೆ ಮಾಡಿದರೆ ಮಾತ್ರ, “ ಮುಚ್ಕೋಂಡ್ ಕುಂತ್ಗ್ಯಳ್ರಲೇ………..” ಎಂದು ಗದರುತ್ತಿದ್ದರು.ನಮಗೆ, ಅವರು ಮಾತನಾಡುತಿದ್ದ ಭಾಷೆಯೇ
ವಿಚಿತ್ರ ಅನಿಸುತ್ತಿತ್ತು. ..ಅವರನ್ನು ರೇಗಿಸಲು, “ಮಂಡ್ಯದ
ಗಂಡು….ಬೆಂಕಿಯ ಚೆಂಡು……” ಎಂದು ಅಂಬರೀಶ್ ರವರ ಹಾಡು ಹೇಳುತ್ತಿದ್ದೆವು. ಶಾಲೆ
ಯಾವುದೇ ಅಡೆ ತಡೆ ಇಲ್ಲದೆ ನಡೆಯುತ್ತಿತ್ತು.
ಅಂದು ಗಣರಾಜ್ಯೋತ್ಸವದ ಹಿಂದಿನ ದಿನ. .. ಶಾಲೆಯಲ್ಲಿ ಪೂರ್ವ ಸಿದ್ದತೆಗಳು
ಚೆನ್ನಾಗಿ ನಡೆದಿತ್ತು…. ಮಾರನೇ ದಿನ ಬೆಳಿಗ್ಗೆ, ಏಳು ಗಂಟೆಗೆ ಎಲ್ಲರೂ ಶಾಲೆಗೆ ಬಂದು, ತಳಿರು ತೋರಣಗಳನ್ನು
ಕಟ್ಟುವುದು ಎಂದು ನಿರ್ಧರಿಸಿದ್ದೆವು.ಅಂದು ಜನವರಿ ಇಪ್ಪತ್ತಾರು, ಬೆಳಿಗ್ಗೆ ಐದು ಗಂಟೆಗೆ ಎದ್ದು, ಸ್ನಾನ ಮಾಡಿ,
ಹೊಸ ರಿಬ್ಬನ್… ಪೌಡರ್… ಇಸ್ತ್ರಿ ಹೊಡೆದ ಅಂಗಿಯೊಂದಿಗೆ, ತಯಾರಾಗಿ ಶಾಲೆಗೆ ಹೋದೆವು. ಮಾಸ್ತರು ಏಳು
ಗಂಟೆಗೆ ಬಂದರು… ಎಲ್ಲಾರು ಸೇರಿ, ಶಾಲೆ ಸಿಂಗರಿಸಿದೆವು. ಉಳಿದ ಕಸವನ್ನು. ಹಿಂದೆ ಎಸೆಯಲು ಮಾಸ್ತರು
ಹೋದರು. ..
ಶಾಲೆ ಹಿಂದೆ ದೊಡ್ಡ ಬೆಟ್ಟವಿದೆ, ಅಲ್ಲಿ
ಮಾಸ್ತರು ಕಸ ಎಸೆಯುತ್ತಾ, ಸ್ವಲ್ಪ ಮುಂದೆ ಕಣ್ಣು ಹಾಯಿಸಿದರು…..“ ಅಮ್ಮಾ……..” ಎಂದು ಕಿರುಚಿ
ಓಡಿ ಬಂದರು ನಾವೆಲ್ಲಾ, ಎನಾಯಿತು ಎಂದು ನೋಡಲು ಹೋದರೆ, ಒಂದು ಗಮಿಯಾ (ಕಾಡುಕೋಣ) ನಿಂತುಕೊಂಡಿತ್ತು. ಮಾಸ್ತರಿಗೆ ಅವರ ಹೃದಯವೇ ಬಾಯಿಗೆ ಬಂದಿತ್ತು,
ನಮಗೆ ಅದು ಸರ್ವೇ ಸಾಮಾನ್ಯವಾಗಿತ್ತು. ನಾವು ಹಳ್ಳಿಯ ಮಕ್ಕಳು, ಎಷ್ಟೋ ಕಾಡುಕೋಣಗಳನ್ನು, ಕಪ್ಪು ಹುಲಿಯನ್ನು
ಎದುರಾ ಎದುರು ನೋಡಿದ್ದೆವು…
ಅವತ್ತು ಗಣರಾಜ್ಯೋತ್ಸವವನ್ನೂ ಆಚರಿಸದೆ,
ಮಾಸ್ತರು ಸಿರ್ಸಿಗೆ (ಅವರ ಮನೆಗೆ) ಓಟಕಿತ್ತರು…….ಮಂಡ್ಯದ ಗಂಡೂ ನಮ್ಮ ಶಾಲೆ ಬಿಟ್ಟು
ಹೋದರು…..
ನಮಗೆ ಮತ್ತೆ ಹೊಸ ಮಾಸ್ತರ ನೋಡುವ
ಅವಕಾಶ… ಒಂದೇ ವರ್ಷದಲ್ಲಿ, ಎರಡು ಮಾಸ್ತರು ಓಡಿ ಹೋದರು…. ಇನ್ನು ಮೂರನೆಯವರ
ನಿರೀಕ್ಷೆಯಲ್ಲಿ ಹಿತ್ತಲಕೈ ಶಾಲೆ ಮತ್ತು ಮಕ್ಕಳು…..
-ಸಶೇಷ
Tuesday, 13 November 2012
ಶಾಲೆ ಮಾಸ್ತರು - 1
ಒಂದು ದಿನ ಊರಿನವರೆಲ್ಲ " ಶಾಲೆಗೆ ಹೊಸ ಮಾಸ್ತರು ಬರ್ತಾರಂತೆ"!!!!! ಎಂದು ಸುದ್ದಿ ಹಬ್ಬಿಸಿದರು . ನಮಗೆಲ್ಲ ಭಯ ,ದುಃಖ ಎಲ್ಲ ಒಟ್ಟೊಟ್ಟಿಗೆ.....ನಾನು ಅಮ್ಮನ ಬಳಿ "ಆಯಿ ನಂಗೆ ನಾಳೆ ಜ್ವರ ಬತ್ತು, ನಾ ಶಾಲೆಗೆ ಹೊಗ್ತ್ನಿಲ್ಲೆ" ಎಂದು ಹಠ ಮಾಡಿದೆ. ಎಲ್ಲಾ ಮಕ್ಕಳದ್ದೂ ಹೀಗೆ, ಒಂದೊಂದು ಹಠ. ಎಷ್ಟೆಂದರೂ ಮಕ್ಕಳೆಲ್ಲಾ "ಒಗ್ಗಟ್ಟಿನಲ್ಲಿ ಬಲವಿದೆ" ಪಾಠ ಕಲಿತವರು.
ಅಂದು ಶುಕ್ರವಾರ, ಮಾಸ್ತರು ಬರುತ್ತಾರೆ ಬಸ್ಸಿಗೆ ಎಂದು ಕಾಯುತ್ತಾ, ಊರವರು, ಮಕ್ಕಳು, ಬಾಯಿತೆರೆದು ಕಾಯುತ್ತಿದ್ದಾರೆ. ನಾನು ಶಾಲೆಯಲ್ಲಿ ಎಲ್ಲರಿಗಿಂತ ದೊಡ್ಡವಳಾದ್ದರಿಂದ ಎಲ್ಲರೂ "ಅಕ್ಕಾ" ಎನ್ನುತ್ತಿದ್ದರು. ನಾನು ಎಲ್ಲರನ್ನೂ (ಶಾಲೆ ಮಕ್ಕಳನ್ನು) ಕರೆದು, "ಇವತ್ತು ಬಸ್ಸು ಬರೋದೆ ಬೇಡಾ ಹೇಳಿ ದೇವರಹತ್ರ ಕೇಳಿಕೊಳ್ಳೋಣ, ಬಸ್ಸು ಬರದೆ ಇದ್ರೆ ಮಾಸ್ತರು ಹೆಂಗೆ ಬತ್ರು?" ಎಂದೆ. ಇನ್ನೇನು ಎಲ್ಲರೂ ತಮ್ಮ ತಮ್ಮ ಪ್ರಾರ್ಥನೆ ಶುರು ಮಾಡುವುದರೊಳಗೆ ಬಸ್ಸು ಬಂದೇ ಬಿಡ್ತು. ಎಲ್ಲಾರೂ ಹೊಸ ಮಾಸ್ತರ ಸ್ವಾಗತಕ್ಕೆ ನಿಂತಿದ್ದಾರೆ..... ಬಸ್ ಡ್ರೈವರ್ ಹೇಳ್ದ "ಮಾಸ್ತರು ಸೋಮವಾರದಿಂದ ಬರ್ತ್ರಂತೆ" ........................
ದೊಡ್ಡವರಿಗೆಲ್ಲಾ ನಿರಾಶೆ.............. ನಮಗೆ ಮಾತ್ರ ಹಾಲಿಗೆ ಜೇನು ಬೆರೆಸಿ ಕುಡಿದಷ್ಟು ಖುಶಿ......... ನಾವು ಆರು ಜನ ಮಕ್ಕಳು ಆವತ್ತು ಪಾರ್ಟಿ ಮಾಡಿದ್ವಿ.......... ಆವಾಗೆಲ್ಲಾ ಪಾರ್ಟಿ ಎಂದ್ರೆ ನೆಲ್ಲಿಕಾಯಿ, ಕೆಂಪು ದಾಸವಾಳ ಹಣ್ಣು, ಕೌಳಿ ಕಾಯಿ, ಮುಳ್ಳಹಣ್ಣು ಮುಂತಾದವುಗಳ ಗಿಡಕ್ಕೆ ಲಗ್ಗೆ ಇಡುವುದು. ಎಲ್ಲಾ ಕೊಯ್ದು ಒಂದು ಕಡೆ ರಾಶಿ ಹಾಕಿ, ಆರು ಜನರು ಸಮನಾಗಿ ಹಂಚಿಕೊಂಡು ತಿನ್ನುವುದು.
ಎರಡು ದಿನ ಹೇಗೆ ಕಳೆಯಿತೋ ಗೊತ್ತೇ ಇಲ್ಲ. ಸೋಮವಾರ ಬಂದೇ ಬಿಟ್ಟಿತು. ಎಲ್ಲರ ಅಮ್ಮಂದಿರು, ಮಕ್ಕಳ ಬಟ್ಟೆಗೆಲ್ಲಾ ಇಸ್ತ್ರಿ ಹಾಕಿ ಮಕ್ಕಳ ಮೋರೆಗೆ ಪೌಡರು ಹಚ್ಚಿ, ಶಾಲೆಗೆ ಸಿದ್ದ ಮಾಡುತ್ತಿದ್ದರು. ನಾವೆಲ್ಲಾ, ಮದುವೆ ಮನೆಗೂ ಪೌಡರ್ ಹಚ್ಕೋಂಡು ಹೊಗ್ತಾ ಇಲ್ಲದೆ ಇರುವ ಕಾಲ ಅದು. ನಮಗೆ ಖುಷಿನೋ ಖುಷಿ. ಪೌಂಡ್ಸ್ ಪೌಡರು, ಎನ್ ಘಮ ಘಮ ಎನ್ನುತ್ತಾ ಇತ್ತು. ಎರಡು ಜಡೆ, ಹೊಸ ರಿಬ್ಬನ್, ಹೊಸ ಪ್ಯಾರಗಾನ್ ಚಪ್ಪಲ್ಲು, ಹೊಸ ಪಾಠಿ ಚೀಲ
ಎಲ್ಲಾ ತಗೊಂಡು ಶಾಲೆಗೆ ಹೊರಟ್ವಿ. ನಾನು ನನ್ನ ತಂಗಿ ಸವಿ, ಪಕ್ಕದ ಮನೆಯ ರೇಖಾ, ಮೇಲಿನ ಮನೆಯ ಪ್ರಸನ್ನ, ಗಣೇಶ, ಹಾಗೂ ಕಾಕಲ ಗದ್ದೆಯ ನಾಗರಾಜ ರಘುಪತಿ, ನಮ್ಮ ಮಕ್ಕಳ ಸೈನ್ಯ ಶಾಲೆಯ ಕಡೆಗೆ ಹೆಜ್ಜೆ ಹಾಕಿತು. ಮಾಸ್ತರು ಬರ್ತಾರೆ ಹೇಳಿ ಶಾಲೆ ಸಾರಿಸಿ, ಚೆನ್ನಾಗಿ ರಂಗೋಲಿ ಹಾಕಿ ಸಿಂಗರಿಸಿದ್ವಿ.
ಬಸ್ಸು ಬಂತು. ಮಾಸ್ತರು ಇಳಿದ್ರು, ನಾವೆಲ್ಲಾ ಬಸ್ಸಿನ ಹತ್ತಿರ ಓಡಿ ಹೋಗಿ, "ಮಾಸ್ತರೇ ಅಂದಿ, ಮಾಸ್ತರೇ ಅಂದಿ, .............ಮಾಸ್ತರೇ ಅಂದಿ, ....." ಅಂತಾ ಕಿರುಚಲು ಶುರು ಮಾಡಿದ್ವಿ. ಮನೇಲಿ ಯಾರೇ ಬಂದರೂ ಮಾತನಾಡಿಸಬೇಕೆಂದು ಹೇಳಿಕೊಟ್ಟಿದ್ದರು.....!!!!!!!!!!
ಮಾಸ್ತರಿಗೆ ಕೋಪ ಮೂಗಿನ ತುದಿಯಲ್ಲಿ ಇತ್ತು ಅನಿಸುತ್ತೆ, (ಈ ಹಳ್ಳಿಗೆ ವರ್ಗಾವಣೆ ಮಾಡಿದ್ದಕ್ಕಿರಬೇಕು, ಇಲ್ಲಾ ಮನೆಯಲ್ಲಿ ಹೆಂಡತಿ ಜಗಳ ಆಡಿರಬೇಕು)............. ಬಸ್ ಇಳಿದವರೇ, ಚೀಲದಿಂದ ಬೆತ್ತ ತೆಗೆದು "ಮುಚ್ಚಿ ಬಾಯಿ" ಎಂದು ಗದರಿದರು. "ಏನಿದು ಫಿಶ್ ಮಾರ್ಕೆಟ್ಟಾ??? ಕಿರುಚೊದಕ್ಕೆ" ಎಂದರು... ನಾವು ಹಳ್ಳಿ ಮಕ್ಕಳಿಗೆ ಪಿಶ್ ಮಾರ್ಕೆಟ್ ಎಂದರೆ ಎನೂ ಅಂತನೂ ಗೊತ್ತಿಲ್ಲ. ಆದ್ರೂ ಬಾಯಿ ಮುಚ್ಕ೦ಡು ಶಾಲೆ ಕೊಠಡಿಯೊಳಗೆ ಬಂದ್ವಿ...
ಮಾಸ್ತರು ಹಾಜರಿ ಹಾಕಿ, ಎಲ್ಲರಿಗೂ "ಅ....ಆ.... ದಿಂದ .... ಜ್ಞಂ...... ಜ್ಞ್ಹ" ವರೆಗೂ ಬರೆಯಿರಿ ಪಾಟಿ ಮೇಲೆ" ಎಂದು ಹೇಳಿ ಮೇಜಿನ ಮೇಲೆ ತಲೆ ಇಟ್ಟು ಮಲಗಿದರು ........zzzzzzzZZZZZzzzzz
ನಾನು, ಪ್ರಸನ್ನ ಎರಡನೆ ತರಗತಿಯವರಾದ್ದರಿಂದ ನಮಗೆ ಬರೆಯಲು ಬರುತ್ತಿತ್ತು. ಇಬ್ಬರೂ ಬರೆಯಲು ಶುರು ಮಾಡಿದೆವು. ಉಳಿದವರು ನಮ್ಮನ್ನು ನೋಡಿ ಬರೆಯತೊಡಗಿದರು. ಆದರಿ ಸವಿ ಮಾತ್ರ ನೋಡಿ ಬರೆಯಲಿಲ್ಲ. ಅವಳಿಗೆ ಅ ದಿಂದ ಅಂ ಅಃ ತನಕ ಮಾತ್ರ ಬರುತಿತ್ತು. ಅಷ್ಟನ್ನೆ ಬರೆದು ಮಾಸ್ತರಿಗೆ ತೋರಿಸಿದಳು. "ನಂಗೆ ಬರುದು ಇಷ್ಟೆ, ಮುಂದೆ ಬರುದಿಲ್ಲ....ಹೇಕೊಡಿ ಬರಿತೇನೆ..." ಎಂದಳು...... ಮಾಸ್ತರು ನಿದ್ದೆಗಣ್ಣಲ್ಲೇ "ಬೆತ್ತ ತಗೋತೆನೆ ಬರಿದೆ ಇದ್ರೆ" ಅಂದು ಮಲಗಿದರು.
ಇವಳಿಗೆ ಮೂಗಿನ ತುದಿಯಲ್ಲಿ ಕೋಪ, ಪಾಠಿಚೀಲ ತಗಂಡು, ಶಾಲೆಗೆ ಹೊರಗಿನಿಂದ ಚಿಲಕ ಹಾಕಿ ಮನೆ ಕಡೆ ಹೊರಟಳು. ನಾವೆಲ್ಲಾ ಶಾಲೆ ಒಳಗೆ ಸಿಕ್ಕಿಹಾಕಿಕೊಂಡ್ವಿ.... ದೂರದಲ್ಲಿ ಹೊಗ್ತಾ ಇರೋಳನ್ನ ಕೂಗಿ..." ಮಾಸ್ತರು ಕಿಟಕಿಯಲ್ಲಿ ಹೊರಗೆ ಹೋದ್ರು, ನಂಗ ಮಾತ್ರ ಶಾಲೆಲ್ಲಿ ಇದ್ಯ.....ಬಾಗಿಲು ತೆಗಿ ಬಾ....." ಎಂದು ಕೂಗಿದೆವು. ಆಗ ಅವಳು, "ನಿಂಗವು ಕಿಡಕಿಯಿಂದನೇ ಹೊರಗೆ ಬನ್ನಿ, ನಾ ಎಂತಕ್ಕೆ ವಾಪಸ್ ಬರ್ಲಿ.....?" ಎಂದು ಹೇಳಿ ಹೊರಟೇ ಹೋದ್ಲು...
ಚಿಕ್ಕ ಹಳ್ಳಿ ಆದ್ದರಿಂದ, ಜನಸಂಖ್ಯೆಯೂ ಕಡಿಮೆ, ಯಾರದರೂ ಆ ದಾರಿಯಲ್ಲಿ ಬರುತ್ತಾರೋ ಎಂದು ಕಾಯುವುದೇ ನಮ್ಮ ಕೆಲಸ. ಮಾಸ್ತರಿಗೇಂತು ನಿದ್ರಾದೇವಿ ಓಡಿಹೋಗಿದ್ದಳು. ಅವರೂ ಕಿಡಕಿಯಲ್ಲಿ ಹೊರಗೆ ಇಣುಕಿ ನೋಡುತ್ತಿದ್ದರು. ಅಂತು ಇಂತು ಹೂವಿನ ಮನೆಯ, ಕೆಲಸದಾಳು ಆ ದಾರಿಯಲ್ಲಿ ಬಂದ, ದೇವರೇ ಬಂದಹಾಗಾಯ್ತು. ಅವನು ಬಂದು ಬಾಗಿಲು ತೆಗೆದು ನಮ್ಮನ್ನು, ಮಾಸ್ತರನ್ನು ಮುಕ್ತಗೊಳಿಸಿದ.
ಅವತ್ತೆ ಕೊನೆ, ಮರುದಿನದಿಂದ ಮಾಸ್ತರು ಬೆತ್ತ ತರೋದನ್ನೆ ಬಿಟ್ಟುಬಿಟ್ಟರು. ಬಯ್ಯುವುದನ್ನೂ ಬಿಟ್ಟರು. ಆರೇ ತಿಂಗಳಿಗೆ ಶಾಲೆಯನ್ನು ಬಿಟ್ಟು, ಬೇರೆ ಊರಿಗೆ ವರ್ಗವಾಗಿ ಹೋದರು………!!!!!!!
ಮತ್ತೆ ಹೊಸ ಮಾಸ್ತರ ನಿರೀಕ್ಷೆಯಲ್ಲಿ ಮಕ್ಕಳು ಮತ್ತು ಊರವರು…..
-ಸಶೇಷ
Subscribe to:
Posts (Atom)