Friday, 16 November 2012

ಶಾಲೆ ಮಾಸ್ತರು - 2




ಹಳೆ ಮಾಸ್ತರು ಬಿಟ್ಟು ಹೋದ ಖುಷಿ ಜಾಸ್ತಿ ದಿನ ಉಳಿಯಲಿಲ್ಲ. ಮತ್ತೆ ಹೊಸ ಮಾಸ್ತರು ಬರುವ ಸುದ್ದಿ ಖಚಿತವಾಯ್ತು. ಈ ಸಾರಿ ಮಾಸ್ತರನ್ನು ಸ್ವಾಗತ ಮಾಡ್ಲಿಕ್ಕೆ, ಊರವರು ಬರಲಿಲ್ಲ. ನಾವು ದೈನಂದಿನಂತೆ ಇಸ್ತ್ರಿ ಇಲ್ಲದ ಅಂಗಿ, ಹಳೆ ಪಾಠಿಚೀಲ, ಮೂಗಿನಲ್ಲಿ ಒಸರುವ ಸಿಂಬಳದೊಂದಿಗೆ ಶಾಲೆ ಮೆಟ್ಟಿಲ ಮೇಲೆ ಕುಳಿತಿದ್ವಿ.


ಬಸ್ ಬಂತು, ಮಾಸ್ತರು ಬರಲೇ ಇಲ್ಲ….!
ಇನ್ನು ಅರ್ಧತಾಸು ಆಟ ಆಡಿಕೊಂಡು ಮನೆಗೆ ಹೋದರಾಯಿತು ಎಂದು “ಕಂಬಕಂಬದಾಟ” ಆಡಲು ಶುರು ಮಾಡಿದೆವು. ಹತ್ತು ನಿಮಷದಲ್ಲಿ ಒಂದು “ಲೂನಾ” ಮೋಟರ್ ಸೈಕಲ್ ಶಾಲೆಯ ಮೆಟ್ಟಿಲ ಬಳಿ ಬಂದು ನಿಂತಿತು. ಮೋಟರ್ ಸೈಕಲ್ ನಿಂದ ಇಳಿದ ಆಸಾಮಿ ನೋಡಲು ಕರ್ರಗೆ, ಡಾಕು ತರ ಇದ್ದ. ನಮಗೆಲ್ಲಾ ಭಯ. . .ಕಾಲಲ್ಲಿ ಇದ್ದ ಗೆಜ್ಜೆಯನ್ನು, ಕಿವಿಯೋಲೆಯನ್ನು ಬೇಗ ಬೇಗ ಕಳಚಿ, ಪಾಠಿ ಚೀಲದೊಳಗೆ ತುಂಬಿಕೋಡೆವು. ಯಾವುದೋ ಕಳ್ಳನಿರಬೇಕೆಂದು ಹತ್ತಿರದಲ್ಲಿದ್ದ ಕೋಲನ್ನು ಕೈಯಲ್ಲಿ ಹಿಡಿದು ಬೆನ್ನ ಹಿಂದೆ ಅಡಗಿಸಿಟ್ಟುಕೊಂಡೆವು.


ಅವನು ಲೂನಾದಿಂದ ಇಳಿದು. ನಮ್ಮಕಡೆ ನೋಡಿ “ಎಯ್,….ಹುಡುಗುರ್ರಾ ನಾನು ನಿಮ್ಮ ಇಸ್ಕೂಲಿಗೆ ಬಂದಿರೋ ಮೆಷ್ಟ್ರು… ನನ್ ಬೈಕ್ ಮೇಲಕ್ ಹತ್ತಸ್ರ್ರಲಾ….” ಎಂದರು.ನಮ್ಮ ಶಾಲೆ, ಶಬರಿ ಮಲೆಯ ಅಯ್ಯಪ್ಪನ ಸನ್ನಿಧಾನವಿದ್ದಂತೆ, ಅಯ್ಯಪ್ಪನನ್ನು ನೋಡಲು ಹದಿನೆಂಟು ಮೆಟ್ಟಿಲುಗಳಾದರೆ, ನಮ್ಮ ಶಾಲೆಗೆ, ಇಪ್ಪತ್ತೆಂಟು  ಮೆಟ್ಟಿಲುಗಳು…..!


ಆಗೆಲ್ಲಾ ಶಾಲೆಗಳಲ್ಲಿ, ಹಲಗೆಗಳೇ ಬೆಂಚುಗಳಾಗಿದ್ದವು. ಎರಡು ಇಂಚು ದಪ್ಪ, ಆರು ಪೂಟು ಉದ್ದ ಇರುತ್ತಿತ್ತು. ನಮ್ಮ ಶಾಲೆಯಲ್ಲಿ ಮೂರು ಬೆಂಚುಗಳಿದ್ದವು. ನಾವು ಕೈಲ್ಲಿದ್ದ ದೊಣ್ಣೆಯನ್ನು ಪಕ್ಕಕ್ಕೆಸದು, ಬೇಗ ಬೇಗ ಶಾಲೆಯೊಳಗೆ ಹೋದೆವು. ಎರೆಡೆರಡು ಜನ ಒಂದೊಂದರಂತೆ, ಬೆಂಚನ್ನು ಎತ್ತಿ ತಂದು ಮೆಟ್ಟಿಲಿನ ಮೇಲೆ ಜಾರು ಬಂಡಿಯನ್ನು ಮಾಡಿದೆವು. ಆಮೇಲೆ ಎಲ್ಲರೂ ಸೇರಿ, ಮಾಸ್ತರರ ಪಲ್ಲಕ್ಕಿಯನ್ನು “ ಒತ್ರೊಪ್ಪೋ ……….. ಒತ್ತಿ…………..” ಎನ್ನುತ್ತಾ ಮೇಲಕ್ಕೆ ಹತ್ತಿಸಿದೆವು..


ಮಾಸ್ತರು ನೋಡಲು ಮಾತ್ರ ಗಡಸು, ಆದರೆ ಮೃದು ಸ್ವಭಾವದವರಾಗಿದ್ದರು. ಬೆತ್ತವೂ ಇರಲಿಲ್ಲ….ಬೈಗುಳಗಳೂ ಇರಲಿಲ್ಲ…..ಮಾಸ್ತರು ಮಂಡ್ಯದವರಾಗಿದ್ದರು. ಜಾಸ್ತಿ ಗಲಾಟೆ ಮಾಡಿದರೆ ಮಾತ್ರ, “ ಮುಚ್ಕೋಂಡ್ ಕುಂತ್ಗ್ಯಳ್ರಲೇ………..” ಎಂದು ಗದರುತ್ತಿದ್ದರು.ನಮಗೆ, ಅವರು ಮಾತನಾಡುತಿದ್ದ ಭಾಷೆಯೇ ವಿಚಿತ್ರ ಅನಿಸುತ್ತಿತ್ತು. ..ಅವರನ್ನು ರೇಗಿಸಲು, “ಮಂಡ್ಯದ ಗಂಡು….ಬೆಂಕಿಯ ಚೆಂಡು……” ಎಂದು ಅಂಬರೀಶ್ ರವರ ಹಾಡು ಹೇಳುತ್ತಿದ್ದೆವು. ಶಾಲೆ ಯಾವುದೇ ಅಡೆ ತಡೆ ಇಲ್ಲದೆ ನಡೆಯುತ್ತಿತ್ತು.


ಅಂದು ಗಣರಾಜ್ಯೋತ್ಸವದ ಹಿಂದಿನ ದಿನ. .. ಶಾಲೆಯಲ್ಲಿ ಪೂರ್ವ ಸಿದ್ದತೆಗಳು ಚೆನ್ನಾಗಿ ನಡೆದಿತ್ತು…. ಮಾರನೇ ದಿನ ಬೆಳಿಗ್ಗೆ, ಏಳು ಗಂಟೆಗೆ ಎಲ್ಲರೂ ಶಾಲೆಗೆ ಬಂದು, ತಳಿರು ತೋರಣಗಳನ್ನು ಕಟ್ಟುವುದು ಎಂದು ನಿರ್ಧರಿಸಿದ್ದೆವು.ಅಂದು ಜನವರಿ ಇಪ್ಪತ್ತಾರು, ಬೆಳಿಗ್ಗೆ ಐದು ಗಂಟೆಗೆ ಎದ್ದು, ಸ್ನಾನ ಮಾಡಿ, ಹೊಸ ರಿಬ್ಬನ್… ಪೌಡರ್… ಇಸ್ತ್ರಿ ಹೊಡೆದ ಅಂಗಿಯೊಂದಿಗೆ, ತಯಾರಾಗಿ ಶಾಲೆಗೆ ಹೋದೆವು. ಮಾಸ್ತರು ಏಳು ಗಂಟೆಗೆ ಬಂದರು… ಎಲ್ಲಾರು ಸೇರಿ, ಶಾಲೆ ಸಿಂಗರಿಸಿದೆವು. ಉಳಿದ ಕಸವನ್ನು. ಹಿಂದೆ ಎಸೆಯಲು ಮಾಸ್ತರು ಹೋದರು. ..


ಶಾಲೆ ಹಿಂದೆ ದೊಡ್ಡ ಬೆಟ್ಟವಿದೆ, ಅಲ್ಲಿ ಮಾಸ್ತರು ಕಸ ಎಸೆಯುತ್ತಾ, ಸ್ವಲ್ಪ ಮುಂದೆ ಕಣ್ಣು ಹಾಯಿಸಿದರು…..“ ಅಮ್ಮಾ……..” ಎಂದು ಕಿರುಚಿ ಓಡಿ ಬಂದರು ನಾವೆಲ್ಲಾ, ಎನಾಯಿತು ಎಂದು ನೋಡಲು ಹೋದರೆ, ಒಂದು ಗಮಿಯಾ (ಕಾಡುಕೋಣ) ನಿಂತುಕೊಂಡಿತ್ತು. ಮಾಸ್ತರಿಗೆ ಅವರ ಹೃದಯವೇ ಬಾಯಿಗೆ ಬಂದಿತ್ತು, ನಮಗೆ ಅದು ಸರ್ವೇ ಸಾಮಾನ್ಯವಾಗಿತ್ತು. ನಾವು ಹಳ್ಳಿಯ ಮಕ್ಕಳು, ಎಷ್ಟೋ ಕಾಡುಕೋಣಗಳನ್ನು, ಕಪ್ಪು ಹುಲಿಯನ್ನು ಎದುರಾ ಎದುರು ನೋಡಿದ್ದೆವು…


ಅವತ್ತು ಗಣರಾಜ್ಯೋತ್ಸವವನ್ನೂ ಆಚರಿಸದೆ, ಮಾಸ್ತರು ಸಿರ್ಸಿಗೆ (ಅವರ ಮನೆಗೆ) ಓಟಕಿತ್ತರು…….ಮಂಡ್ಯದ ಗಂಡೂ ನಮ್ಮ ಶಾಲೆ ಬಿಟ್ಟು ಹೋದರು…..


ನಮಗೆ ಮತ್ತೆ ಹೊಸ ಮಾಸ್ತರ ನೋಡುವ ಅವಕಾಶ… ಒಂದೇ ವರ್ಷದಲ್ಲಿ, ಎರಡು ಮಾಸ್ತರು ಓಡಿ ಹೋದರು…. ಇನ್ನು ಮೂರನೆಯವರ ನಿರೀಕ್ಷೆಯಲ್ಲಿ ಹಿತ್ತಲಕೈ ಶಾಲೆ ಮತ್ತು ಮಕ್ಕಳು…..



-ಸಶೇಷ

13 comments:

  1. :) ಓದುಲೂ ಮಜ ಬಂತು, ಇಷ್ಟನೂ ಆತು.
    Liked.

    ReplyDelete
  2. ಮಸ್ತ್ ಇದ್ದು...All the best..:-)

    ReplyDelete
  3. ಚನ್ನಾಗಿದ್ದು....
    ಆದರೆ ನನ್ನ ಬ್ಲಾಗ್ ಹೆಸರು ಅಘನಾಶಿನಿ.. ನಿಂದೂ ಅಘನಾಶಿನಿ... ಕನ್ ಫ್ಯೂಸ್ ಆಗ್ತು.. ಹೆಸ್ರು ಬದಲಾಯಿಸಿದರೆ ಒಳ್ಳೇದಾಗಿತ್ತು...

    ReplyDelete
    Replies
    1. onde hesrnavu raashi jana irtvilya... hangeya...

      Delete
  4. "ಇಸ್ತ್ರಿ ಹೊಡೆದ " ಈ ಶಬ್ಧ ಮರೆತೇ ಹೋಗಿತ್ತೇನೋ.......ಚೆನ್ನಾಗಿದೆ ಬರೆಯುತ್ತಿರಿ :)
    ಇಷ್ಟವಾದ ಶೈಲಿ..ಮತ್ತೆ ಮನೆ ನೆನಪಾಗುತ್ತದೆ,ನಾ ಕಲಿತ ಡೊಂಬೇಸರ ಶಾಲೆ ನೆನಪಾಗುತ್ತದೆ :)

    ReplyDelete