ಅಘನಾಶಿನಿ ನಮ್ಮ ಮನೆಯ ಬಳಿ ಹರಿಯುವ ನದಿ ........ ನದಿಯ ಹೆಸರೇ ಇಷ್ಟು ಚೆನ್ನಾಗಿರುವಾಗ ನದಿ ಹೇಗಿರ ಬಹುದು? ಅಲ್ವಾ? ನಿಜವಾಗಲು ತುಂಬಾ ನೆನಪಿಸಿಕೊಳ್ತೀನಿ ಕಣೆ.. ಅದಕ್ಕೆ ನಿನ್ನ ಹೆಸ್ರ್ನೆ ಇಟ್ಟಿದಿನಿ ....
Thursday, 10 January 2013
Tuesday, 1 January 2013
ಓತಿಕ್ಯಾತ
ಶಾಲೆಯಲ್ಲಿ ಎಲ್ಲಾ ಮಕ್ಕಳಿಗೂ ಲೀಡರ್ ನಾನಾಗಿದ್ದೆ, ಎಲ್ಲರ ಹತ್ತಿರವೂ ಕೆಲಸ ಮಾಡಿಸುತ್ತಿದ್ದೆ. ಕಸ ಹೆಕ್ಕಿಸುವುದು, ನೀರು ತರಿಸುವುದು, ಹೀಗೆ ಚಿಕ್ಕ ಪುಟ್ಟದ್ದನ್ನೆಲ್ಲ ಮಾಡಿಸುತ್ತಿದ್ದೆ. ಮೊದ ಮೊದಲೂ ಎಲ್ಲಾರೂ ಸಮನ್ವಯಕ್ಕ ಹೇಳಿದ್ದು ಅಂದ್ರೆ ಶ್ರಧ್ಧೆಯಿಂದ ಮಾಡ್ತಾ ಇದ್ರು. ಕೊನೆ ಕೊನೆಗೆ ಅವರೂ ದೊಡ್ಡವರಾದ ಹಾಗೆ ನಾವೇಕೆ ಮಾಡಬೇಕು….? ಎನಿಸಲು ಶುರುವಾಯಿತು.
ಶಾಲೆಯಲ್ಲಿ ನಾನು ಮಹಾರಣಿಯಾಗಿದ್ದೆ, ನನ್ನ ಹಿಂದಿನಿಂದ ನನಗೆ “ಹಾವುರಾಣಿ” ಎಂದು ಹೆಸರಿಟ್ಟರು…..!!!! ಮಕ್ಕಳು ಎಷ್ಟು ಬೇಗ ಬದಲಾಗುತ್ತಾರೆ ನೋಡಿ….
ಒಂದು ದಿನ ಉಳಿದ ಮಕ್ಕಳೆಲ್ಲ ಒಟ್ಟಾಗಿಕೊಂಡು “ಸಮನ್ವಯಕ್ಕ ನೀನೂ ಕಸ ಹೆಕ್ಕು ನಂಗಳ ಸಂತಿಗೆ” ಎಂದರು. ನನಗೆ ಆಗ ತಿಳಿಯಿತು. ಮಹಾರಾಣಿಯ ದರ್ಬಾರು ಮುಗಿಯಿತು, ಇನ್ನು ನಾನೂ ಇವರ ಜೊತೆ ಕೆಲಸ ಮಾಡಬೇಕು, ಎಂದು…
ಆಯಿತು ಎಂದು ಕಸ ಹೆಕ್ಕಲು ಶುರು ಮಾಡಿದೆ. ಕಸಹೆಕ್ಕುವಾಗ, ಒಂದು “ಓತಿಕ್ಯಾತ “ ನನ್ನ ಕೈಗೆ ಕಚ್ಚಿದಂತಾಯಿತು… (ಬಹುಶಃ ತಾಗಿರಬೇಕು) ನಾನು ಅಳಲು ಶುರು ಮಾಡಿದೆ. “ನಂಗೆ ಓತಿಕ್ಯಾತ ಕಚ್ಚಿದೆ, ನೀವೆಲ್ಲಾ ಅದನ್ನು ಹೊಡೆದು ಕೊಲ್ಲಬೇಕು…”
ಆಗ ಅವರೆಲ್ಲಾ ಮಹಾರಾಣಿಯ ಆಜ್ಞೆಯನ್ನು ಪಾಲಿಸುವ ಸೈನಿಕರಂತೆ ಕೋಲು ಕಲ್ಲುಗಳನ್ನು ಹಿಡಿದು. ಓತಿಕ್ಯಾತವನ್ನು ಓಡಿಸಿಕೊಂಡು ಹೋಗಿ ಕೊಂದರು. ಅವರಿಗೆಲ್ಲಾ, ಏನೋ ಸಾಧಿಸಿದ್ದೇವೆ ಎಂಬ ಹೆಮ್ಮೆ. ನಂತರ ಓತಿಕ್ಯಾತದ ಕುತ್ತಿಗೆಗೆ ದಾರ ಕಟ್ಟಿ ಮರಕ್ಕೆ ನೇತು ಹಾಕಿ, ಶಾಲೆಯ ಒಳಗೆ ಹೋದೆವು.
ಮಧ್ಯಾಹ್ನ ಶಾಲೆ ಬಿಟ್ಟಾಗ ಬಂದು ನೋಡಿದರೆ, ಓತಿಕ್ಯಾತ ಮಾಯ…….!!!!! ದಾರ ಮಾತ್ರ ನೇತಾಡುತಿತ್ತು…. ನಮಗೆಲ್ಲಾ ಭಯ… ಮಕ್ಕಳೆಲ್ಲಾ ಸೇರಿ “ಓತಿಕ್ಯಾತ ಭೂತ ಆಗೋಜು, ಸಮಕ್ಕ ಅದು ನಿನ್ನ ಮೇಲೆ ಸೇಡು ತೀರಿಸಿಕೊಳ್ತು… ತಡೀ….” ಎಂದು ನನ್ನ ಹೆದರಿಸಿದರು….
ನನಗೆ ಭಯವೋ ಭಯ…
ಒಂದು ತಿಂಗಳ ನಂತರ, ನಾವೆಲ್ಲಾ ಶಾಲೆ ಮುಗಿಸಿ, ಸಂಜೆ ಮನೆಗೆ ಬರುತ್ತಾ ಇದ್ದೆವು… ದಾರಿಯಲ್ಲಿ, ಮತ್ತೆ ಓತಿಕ್ಯಾತ ಪ್ರತ್ಯಕ್ಷ…!!! ಎಲ್ಲಾ ಮಕ್ಕಳೂ, “ಸಮಕ್ಕಂಗೆ ಕಚ್ಚಿದ ಓತಿಕ್ಯಾತ ಮತ್ತೆ ಬಂಜು……” ಎಂದು ಕಿರುಚಿ, ಕಲ್ಲುಕಳನ್ನು ಎತ್ತಿ, ಓತಿಕ್ಯಾತಕ್ಕೆ ಎಸೆಯಲು ಶುರುಮಾಡಿದರು… ಪಾಪ ಆ ಓತಿಕ್ಯಾತ ಭಯದಿಂದ, ಹತ್ತಿರವಿದ್ದ ಗಿಡವನ್ನು ಹತ್ತಿತು… ಕೋಲುಗಳನ್ನು ಹಿಡಿದು, ಎಲ್ಲರೂ ಓತಿಕ್ಯಾತವನ್ನು ಹೊಡೆಯಲು ಮರದ ಬಳಿ ಹೋದರು… ನಂಗೆ ಭಯ.. ಸ್ವಲ್ಪ ದೂರದಲ್ಲಿ ನಿಂತು ಇದೆಲ್ಲವನ್ನು ನೋಡುತಿದ್ದೆ… ಆಗ, ಸವಿ “ ಅಕ್ಕಾ, ನೀನು ಕಲ್ಲು ಎಸಿ, ಅದನ್ನು ನೀನೂ ಸಾಯಿಸಬೇಕು” ಎಂದಳು…
ನಾನು ಟಾರ್ ರೋಡಿನ ಪಕ್ಕದಲ್ಲಿದ್ದ, ಸ್ವಲ್ಪ ದೊಡ್ಡ ಜಲ್ಲಿ ಕಲ್ಲನ್ನು ಎತ್ತಿ ಗಿಡದ ಕಡೆ ಎಸೆದೆನು, ಅದು ನಾಗರಾಜನ ಹಣೆಗೆ ತಾಗಿತು…ರಕ್ತ ಸುರಿಯ ತೊಡಗಿತು…ಅವನು ನಮ್ಮ ಮನೆಯ ಕೆಲಸಕ್ಕೆ ಬರುವ ರಾಮನ ಮಗ.. ರಾಮ, ನನ್ನ ಅಪ್ಪನ ಹತ್ತಿರ ಹೇಳಿದರೆ, ನನಗೆ ಛಡಿ ಏಟು ಖಂಡಿತ,….ಏನು ಮಾಡುವುದು ಎಂದು ಭಯ…
ಆಗ ನನ್ನ ಸಹಾಯಕ್ಕೆ ಬಂದಿದ್ದು, “ಕಾಂಗ್ರೆಸ್ ಸೊಪ್ಪು”…. (ಪಾರ್ಥೆನಿಯಂ ಗಿಡ) ಅದನ್ನು ಕಲ್ಲಿನ ಮೇಲಿಟ್ಟು ಜಜ್ಜಿ, ಸೊಪ್ಪನ್ನು ಹಣೆಗೆ ಒತ್ತಿ ಹಿಡಿದೆನು… ರಕ್ತ ಬರುವುದು ಸ್ವಲ್ಪ ಕಡಿಮೆ ಆಯಿತು… ನಂತರ ಸಿನಿಮಾದಲ್ಲಿ ಸೀರೆಯ ತುದಿಯನ್ನು ಹರಿದು ಪಟ್ಟಿ ಕಟ್ಟುವುದನ್ನು ನೋಡಿದ್ದೆನು… ನನ್ನ ಪ್ರಾಕಿನ, ಬಾಲವನ್ನು ಕತ್ತರಿಸಿ, ಅವನ ಹಣೆಗೆ ಪಟ್ಟಿ ಕಟ್ಟಿ, ಬೆಟ್ಟದ ದಾರಿಯಿಂದ ಅವನ ಮನೆಗೆ ಕಳಿಸಿದೆವು…ಊರಿನ ದಾರಿಯಲ್ಲಿ ಯಾರಾದರೂ ನೋಡಿದರೆ, ನಾನು ಅಪ್ಪನ ಬಳಿ ಹೊಡೆತ ತಿನ್ನಬೇಕಲ್ಲಾ, ಎಂದು…
ಪಾಪ ನಾಗರಾಜ, ಯಾರ ಬಳಿಯೂ, ನಾನು ಕಲ್ಲು ಎಸೆದು ಹಾಗಾಯಿತು ಎಂದು ಬಾಯಿ ಬಿಡಲೇ ಇಲ್ಲ…
ಬಿದ್ದು ಪೆಟ್ಟಾಯಿತು ಎಂದು, ಸುಳ್ಳು ಹೇಳಿ ನನ್ನನ್ನು ಬಚಾವ್ ಮಾಡಿದ್ದ…
ಓತಿಕ್ಯಾತದ ಅವಾಂತರ ಇಷ್ಟೆಲ್ಲಾ ಆಗಿತ್ತು…
ಅಂದಿನಿಂದ, ಯಾವ ಓತಿಕ್ಯಾತದ ತಂಟೆಗೂ ಹೋಗಲಿಲ್ಲ….
Subscribe to:
Posts (Atom)