Saturday, 24 December 2011

ಅಮ್ಮಾ.....

" ಅಮ್ಮಾ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?    ಅದು ನೀಡುವ ಶಾಂತಿ, ಕಾಂತಿ   ಯಾವ   ತಾರೆ, ರವಿಗಿದೆ ??"

             ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಂದು ಮಗುವಿನ ಮೊದಲ ನುಡಿ "ಅಮ್ಮಾ...". ತಾಯಿ ಪ್ರಕೃತಿಯ  ಅಪೂರ್ವವಾದ ವರ. ಆ ಅಮ್ಮ ಶಬ್ಧದಲ್ಲಿ ಎಷ್ಟು   ವಾತ್ಸಲ್ಯ , ಪ್ರೀತಿ,ಆತ್ಮೀಯತೆ  ತುಂಬಿರುತ್ತದೆ ಅಲ್ವಾ?

                   ಸಂಸ್ಕೃತದಲ್ಲಿ " ಮಾತೃದೇವೋಭವ " ಎಂದು ತಾಯಿಗೇ ಅಗ್ರಸ್ಥ್ಹಾನ  ನೀಡಿದ್ದಾರೆ. ತಾಯಿಯ ಗರ್ಭದಲ್ಲಿ ಮಗು ಅಂಕುರಿಸಿದಾಗಲೇ  ಮಗುವಿನ ಮತ್ತು ತಾಯಿಯ ವಿಶಿಷ್ಟ ಭಾಂದವ್ಯ ಬೆಸೆಯತೊಡಗುತ್ತದೆ .

                              " ತಾಯೇ  ನಿನ್ನ  ಮಡಿಲಲಿ ಕಣ್ಣು ತೆರೆದ ಕ್ಷಣದಲಿ  ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ "
    ಮನುಷ್ಯ ತನ್ನ ಬಾಲ್ಯದಿಂದ  ಮುಪ್ಪಿನವರೆಗೂ  ತಾಯಿಯನ್ನು ಅವಲಂಬಿಸಿರುತ್ತಾನೆ. ಪ್ರತೀ ನೋವಿಗೂ ಮನುಷ್ಯನ ಮೊದಲ ಸ್ಪಂದನ "ಅಮ್ಮಾ.... ". ಮನುಷ್ಯ  ಎಷ್ಟೇ ದೊಡ್ಡವನಾದರೂ  ತಾಯಿಗೇ ಮಗುವೇ. ತಾಯಿಯ ಮಡಿಲಲ್ಲಿ ಸಿಗುವ ನೆಮ್ಮದಿ , ನಿರಾತಂಕ  ಎಲ್ಲಿ ಸಿಗಬಹುದು?  ತ್ಯಾಗ ,ಮಮತೆ ,ಪ್ರೀತಿ,ವಾತ್ಸಲ್ಯಗಳ  ಸಂಗಮ ಆಕೆ. "ಕ್ಷಮಯಾ ಧರಿತ್ರಿ " ಸಂಸಾರಕ್ಕಾಗಿ ತನ್ನ ಸುಖ  ಸಂತೋಷಗಳನ್ನೆಲ್ಲ  ತ್ಯಾಗ ಮಾಡುತ್ತಾಳೆ . ಅಂತಹ ಮಹತ್ತರ ಪಾತ್ರ ತಾಯಿಯದ್ದು . ಆಕೆಯ ವ್ಯಕ್ತಿತ್ವ ಮೇರು ಪರ್ವತದಂತೆ . ಸಂಸ್ಕೃತದ ಮಾತಿನಂತೆ " ಕುಪುತ್ರೋ ಜಾಯೇತ್ ಕ್ವಚಿದಪಿ ಕು ಮಾತಾ ನ ಭವತಿ " ಕೆಟ್ಟ ಮಕ್ಕಳನ್ನು ಕಾಣಬಹುದು , ಆದರೆ ಕೆಟ್ಟ ತಾಯಿಯನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ .

                        ಇಂಗ್ಲೀಷ್ ನಲ್ಲಿ ಒಂದು ಮಾತಿದೆ " god could not be everywhere , therefore he created 'mothers'..". ತಾಯಿ ಪ್ರತ್ಯಕ್ಷ ದೈವ. ಮಗುವಿನ ಒಂದು ನಗುವಿನಿಂದ ತನ್ನೆಲ್ಲ  ನೋವನ್ನು ಮರೆಯುತ್ತಾಳೆ .ಆ ಮಗುವಿಗಾಗಿ ತನ್ನೆಲ್ಲ ಬದುಕನ್ನು ಮುಡಿಪಾಗಿಡುತ್ತಾಳೆ.

                                            " ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧು ಇಲ್ಲ " ಎಂದು ನಮ್ಮ ಗಾದೆಕಾರರು ಹೇಳಿದ್ದಾರೆ.
                                           
                                            " ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಜನನಿಯಿಂದ ಪಾಠ ಕಲಿತ ಜನರು ಧನ್ಯರು ".

                                              ಹೀಗೆ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವ ಶಿಲ್ಪಿಯನ್ನಾಗಿ ಆಕೆಯನ್ನು ನಿರೂಪಿಸಿದ್ದಾರೆ. ಮಕ್ಕಳಿಗೆ ಮಮತೆಯ ಅಮ್ಮನಾಗುವ, ಗುರುವಾಗುವ ,ಸ್ನೇಹಿತೆಯಾಗುವ ,ಮಾರ್ಗದರ್ಶಿಯಾಗುವ ಆಕೆಯ 
ಹೃದಯ ವೈಶಾಲ್ಯತೆಯನ್ನು ಎಷ್ಟು ಹೇಳಿದರೂ ಕಡಿಮೆಯೇ ..

                                           ಗಂಧದ ಕೊರಡಿನಂತೆ ತನ್ನನ್ನು ತಾನು ತೇಯ್ದು ಪರಿಮಳ ಮಧುರತೆಯನ್ನು ಹರಡಿಸುವ ಅವಳ ಬದುಕಿಗೆ ನಾವು ಏನು ಹೋಲಿಸಿದರೂ ಕಡಿಮೆಯೇ . ಎಷ್ಟು ಹೇಳಿದರೂ ಸ್ವಲ್ಪವೇ .ಅವಳು ಅಳೆಯಲಾಗದ ಪ್ರೀತಿಯ ಸಮುದ್ರ . ವಾತ್ಸಲ್ಯದ ಸೋನೆಮಳೆ , ಮುಗಿಯದ ಮಮತೆಯ ಜಲಪಾತ . ಅವಳನ್ನು ವರ್ಣಿಸಲು ಪದಗಳೇ ಇಲ್ಲ.!!..

5 comments: